ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಅರಮನೆಯಲ್ಲಿ ದಾಖಲೆಯ 7ನೇ ಬಾರಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ.
ಶನಿವಾರ ಮಧ್ಯಾಹ್ನ 2.10ರ ಸುಮಾರಿಗೆ ಕುಂಭ ಲಗ್ನದಲ್ಲಿ ನಂದಿಧ್ವಜಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿ ಪೂಜೆ ಸಲ್ಲಿಸಿದರು. ಈ ಮೂಲಕ ಮುಡಾ ಹಗರಣದಲ್ಲಿ ದಸರಾಗೆ ಮುನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಸುಳ್ಳಾಗಿಸಿದರು.
ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ವಿಶ್ವವಿಖ್ಯಾತ ಜಂಬೂಸವಾರಿಗೆ ಚಾಲನೆ ದೊರೆಯಲಿದೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸರ್ಕಾರದ ವತಿಯಿಂದ ಮೈಸೂರು ದಸರಾ ಆಚರಿಸಲಾಗುತ್ತಿದೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ದುಷ್ಟಶಕ್ತಿಗಳ ಸಂಹಾರ, ಶಿಷ್ಟ ಶಕ್ತಿಗಳ ರಕ್ಷಣೆಯಾದ ದಸರಾ ಹಬ್ಬವನ್ನು ಆಚರಿಸೋಣ ಎಂದು ಕರೆ ನೀಡಿದರು.
ದಸರಾಗೆ ಮುನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಿ ಅಂತ ಪ್ರತಿಪಕ್ಷಗಳು ಹೇಳಿದ್ದರಲ್ಲಾ ಎಂಬ ಪ್ರಶ್ನೆಗೆ ಯಾರೋ ಮೂರ್ಖರು ಹೇಳುತ್ತಾರೆ ಅಂದರೆ ಅದೆಲ್ಲಾ ಆಗುತ್ತಾ? ಎಂದು ಪ್ರತಿಕ್ರಿಯಿಸಿದರು.
ಅತ್ಯಂತ ಸಂತೋಷದಿಂದ ದಸರಾ ಜಂಬೂಸವಾರಿಗೆ ಚಾಲನೆ ನೀಡಿದ್ದೇನೆ. ಪ್ರಜಾಪ್ರಭುತ್ವ ಬಂದಾಗಿನಿಂದ ಸರಕಾರ ಈ ಪದ್ಧತಿ ಅನುಸರಿಸಿಕೊಂಡು ಬರುತ್ತಿದೆ. ಎಲ್ಲರಿಗೂ ದಸರಾ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು ಎಂದು ಸಿದ್ದರಾಮಯ್ಯ ಹೇಳಿದರು.