ಕೃಷ್ಣಾ ನ್ಯಾಯಾಧೀಕರಣ-2ರ ತೀರ್ಪಿನನ್ವಯ ರಾಜ್ಯಕ್ಕೆ ದೊರೆಯುವ ಹೆಚ್ಚುವರಿ 130 ಟಿಎಂಸಿ ನೀರು ಉಳಿಸಿಕೊಳ್ಳಲು ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಆಲಮಟ್ಟಿ ಜಲಾಶಯದ ಬಳಿ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲಮಟ್ಟಿ ಜಲಾಶಯದ ಈಗಿನ ಎತ್ತರ 519.60 ಮೀಟರ್ ನಿಂದ 524.25 ಮೀಟರ್ ಎತ್ತರಕ್ಕೆ ಹೆಚ್ಚಿಸಬೇಕಾಗಿದೆ. ಆದರೆ ಇದಕ್ಕೆ ಕೇಂದ್ರಸರ್ಕಾರದ ನೋಟಿಫಿಕೇಶನ್ ಇನ್ನೂ ಆಗಿರುವುದರಿಂದ ಎತ್ತರವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರವು, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳೊಂದಿಗೆ ಚರ್ಚೆ ನಡೆಸಿ ಇತ್ಯರ್ಥ ಮಾಡಿಸುವುದು ಅಗತ್ಯವಿದೆ ಎಂದರು.
ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪಿಗೆ ಕೇಂದ್ರ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಲು ನಾನು ಮತ್ತು ಉಪಮುಖ್ಯಮಂತ್ರಿ ಈಗಾಗಲೇ ಪ್ರಧಾನಮಂತ್ರಿ ಅವರನ್ನು ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು.
ನಾವು ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಸಿದ್ದರಿದ್ದೇವೆ. ನಮ್ಮ ಹಿಂದಿನ ಅವಧಿಯಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ 51,148 ಕೋಟಿ ರೂ.ಗಳ ಅಂದಾಜಿಗೆ ಅನುಮೋದನೆ ನೀಡಲಾಗಿತ್ತು. ಈಗ ಈ ಮೊತ್ತ 80 ಸಾವಿರ ಕೋಟಿ ರೂ.ಗಳಷ್ಟಾಗಬಹುದು ಎಂಬ ಅಂದಾಜಿದೆ. ಪ್ರತಿ ವರ್ಷ ನಮ್ಮ ಸರ್ಕಾರ 20,000 ಕೋಟಿ ಖರ್ಚು ಮಾಡುವ ಮೂಲಕ, 5 ವರ್ಷಕ್ಕೆ ಅಂದಾಜು 1 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಬೇಕೆಂಬುದು ನಮ್ಮ ಸರ್ಕಾರದ ಉದ್ದೇಶಿಸಲಾಗಿದೆ. ಆದರೆ ಇದಕ್ಕೆ ಮೊದಲು ಕೇಂದ್ರ ಸರ್ಕಾರದ ನೋಟಿಫಿಕೇಷನ್ ಆಗಬೇಕಿರುವುದರಿಂದ, ಪ್ರಧಾನಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ನಿರ್ಣಯವಾದರೆ, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆಗೆ ನಾವು ಚಾಲನೆ ನೀಡಬಹುದು.
ಕೃಷ್ಣಾ ನ್ಯಾಯಾಧೀಕರಣ-1ರ ತೀರ್ಪಿನನ್ವಯ ಯುಕೆಪಿ 1 ಹಾಗೂ2ರಲ್ಲಿ 173 ಟಿಎಂಸಿ ನೀರಿನ ಹಂಚಿಕೆಯಡಿ 16.47 ಲಕ್ಷ ಎಕರೆ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳದಿಂದ ಯೋಜನೆಯಿಂದ ಒಟ್ಟು 5.94 ಲಕ್ಷ ಹೆಕ್ಟೇರ್ (14.68 ಲಕ್ಷ ಎಕರೆ) ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. ಬಾಗಲಕೋಟೆ, ಬಿಜಾಪುರ, ಯಲಬುರ್ಗಾ, ಕೊಪ್ಪಳರಾಯಚೂರು, ಬಳ್ಳಾರಿ, ಗುಲ್ಬರ್ಗ, ಯಾದಗಿರಿ ಇವರ ಜನಪ್ರತಿನಿಧಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ, ಪುನರ್ವಸತಿ, ಪುನರ್ನಿರ್ಮಾಣ ಕಾರ್ಯದ ಬಗ್ಗೆ ಚರ್ಚೆ ಮಾಡಲಿದ್ದೇವೆ.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ, ಇಲ್ಲಿಯೂ ಸಮಾನಾಂತರ ಜಲಾಶಯ ನಿರ್ಮಾಣದ ಪ್ರಸ್ತಾಪ ತಮ್ಮ ಮುಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಲಾಶಯದಲ್ಲಿ ಹೂಳು ತುಂಬಿರುವ ಪ್ರಮಾಣ, ನೀರಿನ ಸಾಮರ್ಥ್ಯ, ಇದರಿಂದ ರೈತರಿಗಾಗಬಹುದಾದ ತೊಂದರೆ ಬಗ್ಗೆ ಚರ್ಚೆ ನಡೆಸುತ್ತೇವೆ.
ರೈತರ ಅನುಕೂಲಕ್ಕಾಗಿ ಬಸವ ಸಾಗರ ಸೇರಿದಂತೆ ಇತರ ಜಲಾಶಯಗಳಿಗೆ ನೀರು ಮರುಹಂಚಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಯೋಜನೆಯಲ್ಲಿ ಸ್ಕೀಂ ಎ ಮತ್ತು ಬಿ ಎರಡು ವಿಧವಿದ್ದು, ಯೋಜನಾವಾರು 3ನೇ ಹಂತದಲ್ಲಿ ಹಂಚಿಕೆಯಾಗಿದೆ. ಕೃಷ್ಣಾ ನ್ಯಾಯಾಧೀಕರಣ-1ರ ತೀರ್ಪಿನನ್ವಯ ಯುಕೆಪಿ 1 ಹಾಗೂ2ರಲ್ಲಿ 173 ಟಿಎಂಸಿ ನೀರಿನ ಹಂಚಿಕೆಯಾಗಿದೆ. ಈ ನೀರನ್ನು ಸಂಬಂಧಪಟ್ಟ ಜಿಲ್ಲೆಗೆ ನೀರು ಮರುಹಂಚಿಕೆ ಮಾಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ತುಂಗಭದ್ರಾ ಜಲಾಶಯದಲ್ಲಿ 19ನೇ ಕ್ರೇಸ್ಟ್ ಗೇಟ್ ಅಳವಡಿಕೆಯನ್ನು ಮೂರ್ನಾಲ್ಕು ದಿನಗಳ ಒಳಗಾಗಿ ಪೂರ್ಣಗೊಳಿಸಲಾಗಿದೆ. ದುರಸ್ತಿಯ ಅವಧಿಯಲ್ಲಿ 35 ಟಿಎಂಸಿ ನೀರು ಮಾತ್ರ ಪೋಲಾಗಿದೆ. ಇಂದಿಗೂ ಜಲಾಶಯದಲ್ಲಿ ಸುಮಾರು 78 ಟಿಎಂಸಿ ನೀರಿದೆ. ಇನ್ನೂ 20 ಟಿಎಂಸಿ ನೀರು ಹರಿದುಬಂದರೆ, ಜಲಾಶಯ ಶೇ.95 ರಷ್ಟು ಭರ್ತಿಯಾಗುತ್ತದೆ. ಈಗಾಗಲೇ ಕರ್ನಾಟಕ, ತೆಲಂಗಾಣ, ಆಂಧ್ರದ ರೈತರ ಮೊದಲ ಬೆಳೆಗೆ ನೀರು ಬಿಡಲಾಗಿದೆ. ಆದ್ದರಿಂದ ರೈತರಿಗೆ ಯಾವುದೇ ಆತಂಕ ಬೇಡ ಎಂದು ಹೇಳಿದರು.