ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಪೂರ್ಣಾವಧಿ ಪೂರ್ಣಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಬಂದಿರುವ ಮಾಹಿತಿ ಪ್ರಕಾರ ರಾಷ್ಟ್ರಮಟ್ಟದಲ್ಲಿ ರಾಜಕೀಯ ಬೆಳವಣಿಗೆ ಬೇರೆ ರೀತಿಯಲ್ಲಿ ನಡೆಯುತ್ತಿದೆ. ಮೋದಿ ಸರ್ಕಾರ ಅವಧಿ ಪೂರ್ಣಗೊಳಿಸುವುದಿಲ್ಲ ಎಂದರು.
ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿಯೇ 5 ವರ್ಷಗಳ ಅವಧಿ ಪೂರ್ಣಗೊಳಿಸುವುದಿಲ್ಲ. ಅಂತಹದ್ದರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಬಿದ್ದು ಹೋಗುತ್ತದೆ. ಇವತ್ತು ಬೀಳುತ್ತೆ, ನಾಳೆ ಬೀಳುತ್ತೆ ಅಂತ ಹೇಳಿಕೆ ಕೊಡುತ್ತಿದ್ದಾರೆ. ನಮ್ಮದು 136 ಶಾಸಕರನ್ನು ಹೊಂದಿರುವ ಪೂರ್ಣ ಬಹುಮತ ಪಡೆದ ಸರ್ಕಾರ ಹೇಗೆ ಬೀಳುತ್ತೆ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸುತ್ತಿದ್ದು, ಸುಳ್ಳು ಆರೋಪಗಳನ್ನು ಮಾತ್ರ ಮಾಡುತ್ತಿಲ್ಲ ಬದಲಾಗಿ ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮುಗಿಸಲು ತಂತ್ರ ರೂಪಿಸುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಕೇಂದ್ರ ರೈಲ್ವೆ ಸಚಿವ ರಾಹುಲ್ ಗಾಂಧಿ ಅವರನ್ನು ಬಯೋತ್ಪಾದಕ ಎಂದು ಹೇಳಿದ್ದಾರೆ. ಮತ್ತೊಬ್ಬ ಶಿಂಧೆ ಬಣದ ಶಾಸಕ ನಾಲಗೆ ಕತ್ತರಿಸಿದ ಬಹುಮಾನ ಕೊಡ್ತೀನಿ ಅಂತ ಹೇಳ್ತಾನೆ. ಇನ್ನೊಬ್ಬ ಇಂದಿರಾಗಾಂಧಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ಬೆದರಿಕೆ ಹಾಕುತ್ತಾನೆ. ಇದು ಬಿಜೆಪಿ ರೂಪಿಸುತ್ತಿರುವ ಅಜೆಂಡಾ ಎಂದು ಅವರು ಹೇಳಿದರು.