ವಾಣಿಜ್ಯ ಬಳಕೆಯ 19 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ದರ 69 ರೂ. ಇಳಿಕೆ ಮಾಡಲಾಗಿದ್ದು, ಜೂನ್ 1ರಿಂದಲೇ ಜಾರಿಗೆ ಬಂದಿದೆ. ಆದರೆ ಜನ ಸಾಮಾನ್ಯರು ಬಳಸುವ ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಅಂತಾರಾಷ್ಟ್ರೀಯ ಮಟ್ಟದ ಕಚ್ಚಾ ತೈಲ ಬೆಲೆ ಇಳಿಕೆ ಕಂಡ ಹಿನ್ನೆಲೆಯಲ್ಲಿ ಹೋಟೆಲ್, ಮತ್ತು ರೆಸ್ಟೋರೆಂಟ್ ಗಳಲ್ಲಿ ಬಳಸಲಾಗುವ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ ಕಡಿತ ಮಾಡಲಾಗಿದೆ.
ಇದೇ ವೇಳೆ ವಿಮಾನಗಳಿಗೆ ಬಳಸುವ ಇಂಧನ ಕೂಡ ಶೇ.6.5ರಷ್ಟು ಕಡಿತ ಮಾಡಲಾಗಿದ್ದು, ವಿಮಾನ ದರಗಳಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ರಾಜಧಾನಿ ದೆಹಲಿಯಲ್ಲಿ ಇಂಧನ ದರ ಕಿಲೋ ಲೋಟರ್ ಗೆ 94,969ರೂ.ನಿಂದ 6673.87 ರೂ. ಕಡಿತವಾಗಲಿದೆ.
ಸತತ ಮೂರನೇ ಬಾರಿ ವಿಮಾನಗಳ ಇಂಧನ ಹಾಗೂ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಗಳ ದರದಲ್ಲಿ ಇಳಿಕೆಯಾಗಿದೆ. ವಿಮಾನಗಳ ಇಂಧನ ದರ ಮೇ 1ರಂದು ಶೇ.0.7ರಷ್ಟು ಅಂದರೆ 749 ರೂ. ಕಡಿತಗೊಳಿಸಲಾಗಿತ್ತು.
ಗ್ಯಾಸ್ ಸಿಲಿಂಡರ್ ದರ ಏಪ್ರಿಲ್ ನಲ್ಲಿ 30.5 ರೂ. ಮತ್ತು ಮೇನಲ್ಲಿ 19ರೂ. ಕಡಿತಗೊಳಿಸಲಾಗಿತ್ತು. ಇದೀಗ ಮೂರನೇ ಬಾರಿ 69 ರೂ. ಕಡಿತ ಮಾಡಲಾಗಿದೆ. ಇದೀಗ ಗ್ಯಾಸ್ ಸಿಲಿಂಡರ್ ದರ 1676 ರೂ. ಆಗಿದೆ.
ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದರಿಂದ 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆ 803 ರೂ. ಆಗಿದೆ.
ಅಡುಗೆ ಅನಿಲ ದರ ಈ ವರ್ಷ ಎರಡು ಬಾರಿ ಮಾತ್ರ ಇಳಿಕೆ ಮಾಡಲಾಗಿದ್ದು, ಫೆಬ್ರವರಿಯಲ್ಲಿ 14 ರೂ. ಮತ್ತು ಮಾರ್ಚ್ ನಲ್ಲಿ 25.5 ರೂ. ಇಳಿಕೆ ಮಾಡಲಾಗಿತ್ತು.