ಕೋಲಾರದಲ್ಲಿ ಟಿಕೆಟ್ ಘೋಷಣೆ ಕುರಿತು ನಡೆದ ಸ್ಥಳೀಯ ಶಾಸಕರ ಬಂಡಾಯ ಶಮನಗೊಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಎಂಸಿ ಸುಧಾಕರ್, ಎಂಎಲ್ ಸಿ ಅನಿಲ್ ಕುಮಾರ್, ನಜೀರ್ ಅಹ್ಮದ್ ಮತ್ತು ಶಾಸಕ ಕೊತ್ತನೂರು ಮಂಜುನಾಥ್ ಲೋಕಸಭೆಗೆ ಕೆಎಚ್ ಮುನಿಯಪ್ಪ ಅಳಿಯ ಪೆದ್ದಣ್ಣಗೆ ಟಿಕೆಟ್ ನೀಡದಂತೆ ಒತ್ತಾಯ ಮಾಡಿದ್ದರು. ಅಲ್ಲದೇ ಅವರಿಗೆ ಟಿಕೆಟ್ ನೀಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿ ಬಂಡಾಯ ಘೋಷಿಸಿದ್ದರು.
ಸ್ಥಳೀಯ ಶಾಸಕರ ಬಂಡಾಯದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಕೋಲಾರಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಬಂಡಾಯ ಶಾಸಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ವಿಷಯವನ್ನು ಹೈಕಮಾಂಡ್ ಗೆ ಬಿಡಲು ಒಪ್ಪಿಗೆ ಸೂಚಿಸಿದ್ದು, ಯಾವುದೇ ಅಭ್ಯರ್ಥಿ ಆದರೂ ಅವರಿಗೆ ಬೆಂಬಲ ನೀಡಿ ಗೆಲ್ಲಿಸುವುದಾಗಿ ಬಂಡಾಯ ಶಾಸಕರು ಸಮ್ಮತಿಸಿದ್ದಾರೆ.
ದಲಿತ ಸಮುದಾಯದ ಬಲಗೈ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬುದು ಬಂಡಾಯ ಶಾಸಕರ ಬೇಡಿಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಜಿ ಸಂಧಾನ ಮಾಡಿ ಮನವೊಲಿಸಲಾಗಿದೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ನಂತರ ಮಾತನಾಡಿದ ಸಚಿವ ಎಂ.ಸಿ. ಸುಧಾಕರ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರಿಂದ ಪಕ್ಷಕ್ಕೆ ಆಗಿರುವ ಮುಜುಗರಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ. ಅಲ್ಲದೇ ನಮ್ಮ ಬೇಡಿಕೆಯನ್ನು ಹಾಗೂ ಅಭ್ಯರ್ಥಿ ಆಯ್ಕೆ ಕುರಿತ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಹೈಕಮಾಂಡ್ ಯಾರೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ ಅದಕ್ಕೆ ಬದ್ಧರಾಗಿ ಕೆಲಸ ಮಾಡುವುದಾಗಿ ಹೇಳಿದರು.