ಇರಾನ್ ನ ಸದೇಗ್ಹ್ ಬೈಟ್ ಸಯಾಹ್ ಪದೇಪದೇ ಆಕ್ಷೇಪಾರ್ಹ ಧ್ವಜವನ್ನು ಪ್ರದರ್ಶನ ಮಾಡಿದ್ದಕ್ಕಾಗಿ ಪ್ಯಾರಾಲಿಂಪಿಕ್ಸ್ ಜಾವೆಲಿನ್ ಎಸೆತ ಎಫ್ 41 ವಿಭಾಗದಿಂದ ಅನರ್ಹಗೊಳಿಸಲಾಯಿತು. ಇದರಿಂದ ಬೆಳ್ಳಿ ಗೆದ್ದಿದ್ದ ಭಾರತದ ನವದೀಪ್ ಸಿಂಗ್ ಅನಾಯಸವಾಗಿ ಚಿನ್ನದ ಪದಕ ಒಲಿದು ಬಂದಿದೆ.
ಶನಿವಾರ ತಡರಾತ್ರಿ ನಡೆದ ಜಾವೆಲಿನ್ ಎಫ್ 41 ವಿಭಾಗದ ಫೈನಲ್ ನಲ್ಲಿ ಹರಿಯಾಣ ಮೂಲದ 23 ವರ್ಷದ ಭಾರತದ ನವದೀಪ್ ಸಿಂಗ್ 47.32 ಮೀ. ದೂರ ಎಸೆದು ವೈಯಕ್ತಿಕ ಗರಿಷ್ಠ ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದಿದ್ದರು.
ಟೊಕಿಯೊ ಒಲಿಂಪಿಕ್ಸ್ ನಲ್ಲಿ 4ನೇ ಸ್ಥಾನ ಪಡೆದಿದ್ದ ನವದೀಪ್ ಸಿಂಗ್ ಈ ಬಾರಿ ಬೆಳ್ಳಿ ಪದಕ ಬಂದಿದ್ದರಿಂದ ಸಂಭ್ರಮಿಸಿದ್ದರು. ಆದರೆ ಇರಾನ್ ಸ್ಪರ್ಧಿ 47.62 ಮೀ. ದೂರ ಎಸೆದು ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದ್ದರು. ಆದರೆ ಪದೇಪದೇ ಎಚ್ಚರಿಕೆ ನೀಡಿದ ಹೊರತಾಗಿಯೂ ಧ್ವಜವನ್ನು ಪ್ರದರ್ಶನ ಮಾಡಿದ್ದಕ್ಕಾಗಿ ಟೂರ್ನಿಯಿಂದ ಅನರ್ಹಗೊಳಿಸಲಾಯಿತು.
ಇದರಿಂದ ನವದೀಪ್ ಗೆ ಚಿನ್ನದ ಪದಕ ಲಭಿಸಿದರೆ, 44.72 ಮೀ. ಎಸೆದಿದ್ದ ಚೀನಾದ ಸನ್ ಪೆನ್ಸಿ ಕಾಂಗ್ ಬೆಳ್ಳಿ ಪದಕ ಗೆದ್ದುಕೊಂಡರು. ಇರಾಕ್ ನ ನುಕೈಲ್ ವಾಲಿ (40.46ಮೀ.) ಕಂಚಿನ ಪದಕ ಗಳಿಸಿದರು.
ಇರಾನ್ ಸ್ಪರ್ಧಿ ಪದೇಪದೆ ರಾಷ್ಟ್ರಧ್ವಜ ಅಲ್ಲದ ಮತ್ತೊಂದು ಧ್ವಜವನ್ನು ಪದೇಪದೇ ಪ್ರದರ್ಶಿಸಿದರು. ಈ ಧ್ವಜವನ್ನು ತಮ್ಮ ಬ್ಯಾಗ್ ಮೇಲೆ ಬರೆಸಿಕೊಂಡಿದ್ದು, ಆಕಸ್ಮಿಕ ಘಟನೆ ಎಂದು ಸಮಜಾಯಿಷಿ ನೀಡಿ ಮೇಲ್ಮನವಿ ಸಲ್ಲಿಸಿತ್ತು. ಆದರೆ ಒಲಿಂಪಿಕ್ಸ್ ಸಂಸ್ಥೆಯ 8.1ರ ಆಕ್ಷೇಪಾರ್ಹ ಬರಹ ಪ್ರದರ್ಶನ ನಿಯಮದಡಿ ಅನರ್ಹಗೊಳಿಸಿರುವ ಆದೇಶವನ್ನು ಎತ್ತಿ ಹಿಡಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.