ಮಂಗಳೂರು: ಮ್ಯಾಟ್ರೊಮೊನಿಯೊದಲ್ಲಿ ಪರಿಚಯ ಮಾಡಿಕೊಂಡು ಮದುವೆ ಆಗುವ ನೆಪದಲ್ಲಿ ಯುವತಿಯಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿ ಹಾಗೂ ನಕಲಿ ಮಾವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮದುವೆಯಾಗುವುದಾಗಿ ವಂಚಿಸುತ್ತಿದ್ದ ಸುಶಾಂತ್ ಪೂಜಾರಿ ಮತ್ತು ಮಾವ ಎಂದು ಹೇಳಿಕೊಂಡು ಮದುವೆಗೆ ಸಹಕರಿಸಿದ್ದ ಭಾಸ್ಕರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಮೂಲ್ಕಿ ನಿವಾಸಿಯಾಗಿರುವ ಸುಶಾಂತ್ ಪೂಜಾರಿ ಮಹಾರಾಷ್ಟ್ರದಲ್ಲಿ ಇಬ್ಬರು ಹಾಗೂ ಉಡುಪಿಯ ಇಬ್ಬರು ಹಾಗೂ ಬೆಂಗಳೂರಿನ ಇಬ್ಬರು ಸೇರಿದಂತೆ 9 ಯುವತಿಯನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರಿಗೆ ಸುಶಾಂತ್ ಪೂಜಾರಿ ಆನ್ಲೈನ್ ಮದುವೆ ಪ್ಲಾಟ್ ಫಾರಂ ಮೂಲಕ ಪರಿಚಯವಾಗಿ ಮಹಾರಾಷ್ಟ್ರದ ಘನಸೋಳಿಯ ನವ ಮುಂಬೈನಲ್ಲಿ 2025 ಫೆ. 2 ರಂದು ಮದುವೆಯಾಗಿದ್ದರು. ಈ ಮಹಿಳೆಯನ್ನು ನಂಬಿಸಿ ಸುಶಾಂತ್ ಪೂಜಾರಿ ಹಂತ ಹಂತವಾಗಿ 6.60 ಲಕ್ಷ ರೂ. ಹಣ ಪಡೆದು ವಂಚಿಸಿದ್ದ. ಈತ ಇದೇ ರೀತಿ ೯ ಮದುವೆ ಆಗಿ ವಂಚಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
2025ರ ನವೆಂಬರ್ 15 ರಿಂದ ನಾಪತ್ತೆಯಾಗಿದ್ದ ಸುಶಾಂತ್ ಪೂಜಾರಿ ಬಗ್ಗೆ ಬಗ್ಗೆ ಅನುಮಾನಗೊಂಡು ಆತನ ಬಗ್ಗೆ ವಿಚಾರಿಸಿದಾಗ ಇದೇ ರೀತಿ ಹಲವು ಕಡೆಗಳಲ್ಲಿ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ವಂಚಿಸಿರುವ ಹಾಗೂ ಈ ಮೊದಲು ಒಂದು ಮದುವೆ ಆಗಿರುವ ವಿಚಾರ ತಿಳಿದಿದೆ. ಹೀಗಾಗಿ ನೊಂದ ಮಹಿಳೆಯು ಕಾವೂರು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ದ ದೂರು ನೀಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು, ಆರೋಪಿತ ಸುಶಾಂತ್ ಪೂಜಾರಿ ಯಾನೆ ಸುಶಾಂತ್ ಅಂಕುಶ್ ಪೂಜಾರಿ ಯಾನೆ ಸುಶಾಂತ್ ಜಿ ಕರ್ಕೇರಾ (32) ಎಂಬಾತನನ್ನು ಫೆ. 5 ರಂದು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿ ಆನ್ಲೈನ್ ಮದುವೆ ಪ್ಲಾಟ್ಫಾರಂ ಮೂಲಕ ಪರಿಚಯ ಮಾಡಿಕೊಂಡು ಈ ಮೊದಲು 2021 ರಲ್ಲಿ ಉಡುಪಿಯ ಹುಡುಗಿಯೊಬ್ಬಳನ್ನು ಮದುವೆ ಆಗಿರುವುದು ತಿಳಿದುಬಂದಿದೆ.
ಉಡುಪಿ ಇಬ್ಬರು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದುಕೊಂಡಿದ್ದು, ಮುಂಬೈನ ಇಬ್ಬರು ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿರುವುದು ತಿಳಿದುಬಂದಿದೆ. ಅದೇ ರೀತಿ ಬೆಂಗಳೂರಿನಲ್ಲೂ ಇಬ್ಬರು ಯುವತಿಗೆ ಮಂಕುಬೂದಿ ಎರಚಿ ಮೋಸ ಮಾಡಿದ್ದಾನೆ.
ಕಾರ್ಕಳದ ಓರ್ವ ಹುಡುಗಿಗೆ ಮದುವೆ ಆಗುವುದಾಗಿ ನಂಬಿಸಿ ವಂಚಿಸಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದರು.


