ಬೆಳಗಾವಿಯಿಂದ ವಾರದ ಹಿಂದೆಯಷ್ಟೇ ಬೆಂಗಳೂರಿಗೆ ಮರಳಿದ್ದ ವ್ಯಕ್ತಿಯನ್ನು ಸ್ನೇಹಿತರೇ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಬೆಂಗಳೂರು ಸಮೀಪ ನಡೆದಿದೆ.
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಬಳಿ ಬುಧವಾರ ಮಧ್ಯರಾತ್ರಿ ದೊಡ್ಡಬಳ್ಳಾಪುರದ ತ್ಯಾಗರಾಜನಗರದ ಬುಲೆಟ್ ರಘು (38) ಕೊಲೆ ಮಾಡಲಾಗಿದೆ.
ಬಾಶೆಟ್ಟಿಹಳ್ಳಿಯ ಯಲಹಂಕ ರಸ್ತೆಯಲ್ಲಿ ಬುಲೆಟ್ ರಘುನನ್ನು ದುಷ್ಕರ್ಮಿಗಳು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜುಕೊಲೆಯಾದ ರಘು(38) ತ್ಯಾಗರಾಜನಗರದ ನಿವಾಸಿಯಾಗಿದ್ದಾನೆ.
ಏಳೆಂಟು ವರ್ಷಗಳ ಹಿಂದೆ ಈ ಊರು ಬಿಟ್ಟು ಬೆಳೆಗಾವಿಯಲ್ಲಿ ಹೋಟೆಲ್ ಇಟ್ಟುಕೊಂಡು ಜೀವನ ಮಾಡುತ್ತಿದ್ದ, ಅಲ್ಲಿಯೇ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಅಲ್ಲಿಯೇ ವಾಸವಾಗಿದ್ದ. ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದ ಎಂದು ಮಾಹಿತಿ ಇದೆ ಎಂದು ತಿಳಿಸಿದರು.
ಈ ಹಿಂದೆ ಇಬ್ಬರ ಜೊತೆಗೆ ಗಲಾಟೆ ಮಾಡಿಕೊಂಡು, ಪ್ರಕರಣ ದಾಖಲಾಗಿ, ನಂತರ ಅವರ ಜೊತೆಗೆ ರಾಜಿ ಮಾಡಿಕೊಂಡಿದ್ದ. ನಿನ್ನೆ ಸಂಜೆ 6 ಗಂಟೆ ಹೊತ್ತಿಗೆ, ಅವರ ತಾಯಿ ಜೊತೆ ಸ್ನೇಹಿತರ ಜೊತೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಬಂದಿದ್ದ. ಆತನ ಜೊತೆಗೆ ಬಂದಿದ್ದ ಸ್ನೇಹಿತರು ಯಾರೂ ಕಾಣಿಸುತ್ತಿಲ್ಲ. ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಉಳಿದ ಮಾಹಿತಿ ಅವನ ಸ್ನೇಹಿತರು ಸಿಕ್ಕಿದ ಮೇಲೆ ಗೊತ್ತಾಗುತ್ತದೆ” ಎಂದರು.
ಮಾರಕಾಸ್ತ್ರದಿಂದ ತಿವಿದು, ಆಮೇಲೆ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಅತಿಯಾಗಿ ಕುಡಿದ ಅಮಲಿನಲ್ಲಿ ಕೊಲೆ ಮಾಡಲಾಗಿದೆ. ಅವನ ಸ್ನೇಹಿತರು ಸಿಕ್ಕ ಮೇಲೆ ಹೆಚ್ಚಿನ ಮಾಹಿತಿ ಗೊತ್ತಾಗುತ್ತದೆ. ಮೇಲ್ನೋಟಕ್ಕೆ ಸ್ಥಳೀಯ ಸ್ನೇಹಿತರೆ ಕೊಲೆ ಮಾಡಿರುವ ಸಂಶಯವಿದೆ.
ಕೊಲೆಗೈದು ಪರಾರಿಯಾಗಿರುವ ಅವನ ಸ್ನೇಹಿತರನ್ನು ಪತ್ತೆ ಹಚ್ಚಲು ತಂಡ ರಚನೆ ಮಾಡಲಾಗಿದೆ. ಕೊಲೆಯಾದ ವ್ಯಕ್ತಿ ರೌಡಿ ಶೀಟರ್ ಆಗಿರಲಿಲ್ಲ. ಕೆಲವು ವರ್ಷಗಳ ಹಿಂದೆ ಸಣ್ಣ ಗಲಾಟೆ ಮಾಡಿದ್ದ. ಕಳೆದ 10 ವರ್ಷಗಳಿಂದ ಆ ರೀತಿಯ ಯಾವುದೇ ಚಲನವಲನಗಳು ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಆ ಬಗ್ಗೆಯೂ ತನಿಖೆ ಮಾಡುತ್ತೇವೆ. ಶೀಘ್ರವೇ ಆರೋಪಿಗಳ ಪತ್ತೆ ಮಾಡಲಾಗುವುದು” ಎಂದು ಹೇಳಿದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.


