ಬಾಗಲಕೋಟೆ: ಕುಡಿದು ಬಂದು ಹೆತ್ತವರಿಗೆ ಕಿರುಕುಳ ನೀಡುತ್ತಿದ್ದ ಕುಡುಕ ಸಹೋದರನನ್ನು ತಂದೆ-ತಾಯಿ ಜೊತೆಗೂಡಿ ಬೆಂಕಿ ಹಚ್ಚಿ ಯೋಧ ಕೊಲೆ ಮಾಡಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮದ ತೋಟದ ಮನೆಯಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಡೀಸೆಲ್ ಸುರಿದು ಬೆಂಕಿ ಹಚ್ಚಿ ಅನಿಲ್ ಪರಪ್ಪ ಕಾನಟ್ಟಿ (32)ಯನ್ನುಕೊಲೆ ಮಾಡಲಾಗಿದೆ.
ಕುಡಿದ ಅಮಲಿನಲ್ಲಿ ನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದರಿಂದ ರೊಚ್ಚಿಗೆದ್ದು ಸಹೋದರ ಯೋಧ ಬಸವರಾಜ ಕಾನಟ್ಟಿ, ತಂದೆ ಪರಪ್ಪ ಕಾನಟ್ಟಿ, ತಾಯಿ ಶಾಂತಾ ಕಾನಟ್ಟಿ ಸೇರಿ ಮೂವರು ಕೊಲೆ ಮಾಡಿದ್ದಾರೆ.
ಕೊಲೆ ಪ್ರಕರಣಕ್ಕೆ ತಂದೆ ಪರಪ್ಪ ಕಾನಟ್ಟಿ, ತಾಯಿ ಶಾಂತಾ ಕಾನಟ್ಟಿ ಮತ್ತು ಸೋದರ ಬಸವರಾಜ ಕಾನಟ್ಟಿ ಬಂಧಿಸಿರುವ ಸಾವಳಗಿ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕೊಲೆಯಾದ ಅನಿಲ್ ದುಶ್ಚಟಕ್ಕೆ ದಾಸನಾಗಿದ್ದ. ಆನ್ ಲೈನ್ ಬೆಟ್ಟಿಂಗ್, ಕುಡಿತ, ಮೋಜು ಮಸ್ತಿಗಾಗಿ 20 ಲಕ್ಷ ರೂ ಸಾಲ ಮಾಡಿದ್ದ. ಕುಟುಂಬ ಆತನ ಸಾಲ ಕೂಡ ತೀರಿಸಿತ್ತು. ಬಳಿಕ ಮತ್ತೆ 5 ಲಕ್ಷ ರೂ ಹಣ ಕೇಳುತ್ತಿದ್ದ. ತನ್ನ ಪಾಲಿನ ಆಸ್ತಿ ನೀಡುವಂತೆ ನಿತ್ಯ ಜಗಳ ಮಾಡುತ್ತಿದ್ದನು.
ಒಂದು ವೇಳೆ ಆಸ್ತಿ ಕೊಟ್ಟರೆ ಅದನ್ನು ಮಾರಾಟ ಮಾಡುತ್ತಾನೆ ಎಂದು ಕೊಟ್ಟಿರಲಿಲ್ಲ. ಆತನ ಮದುವೆ ಮಾಡಿ ನಂತರ ಆಸ್ತಿ ಕೊಡಲು ತಂದೆ-ತಾಯಿ ಹಾಗೂ ಸಹೋದರ ಮುಂದಾಗಿದ್ದರು. ಆದರೆ ಅನಿಲ್ ನಿತ್ಯ ಕಾಟ ಕೊಡುವುದು, ಜಗಳ ಮಾಡುವುದು ಮಾತ್ರ ತಪ್ಪಿರಲಿಲ್ಲ. ಕೊಲೆಯಾಗುವ ದಿನದಂದು ಕೂಡ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದ.
ಅನಿಲ್ನ ಸಹೋದರ ಬಸವರಾಜ ಕಾನಟ್ಟಿ ಓರ್ವ ಯೋಧ. ರಜೆಗೆ ಊರಿಗೆ ಬಂದಿದ್ದ. ಆತನ ಜೊತೆಗೂ ಜಗಳ ಮಾಡಿದ್ದಾನೆ. ನನ್ನ ಆಸ್ತಿ ಕೊಡದಿದ್ದರೆ ನಿಮ್ಮನ್ನು ಸಾಯಿಸುತ್ತೇನೆ ಎಂದು ಕೈಗೆ ಸಿಕ್ಕ ವಸ್ತುಗಳಿಂದ ತಂದೆ-ತಾಯಿ ಮತ್ತು ಸಹೋದರನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಪರಿಸ್ಥಿತಿ ಕೈ ಮೀರಿದಾಗ ಕಳೆದ ಸೆಪ್ಟೆಂಬರ್ 5 ರಂದು ಅನಿಲ್ನ ಕೈ, ಕಾಲಿಗೆ ಹಗ್ಗ ಕಟ್ಟಿ ಕೊಲೆ ಮಾಡಿದ್ದಾರೆ. ನಂತರ ಡೀಸೆಲ್ ಹಾಕಿ ಸುಟ್ಟಿದ್ದಾರೆ. ಸಾವಳಗಿ ಪೊಲೀಸರು ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


