ಹಾಸನ: ಕುಡಿಯಲು ಜೊತೆಗೆ ಬಂದವನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆಟೋ ಚಾಲಕ ಶವದ ಸೆಲ್ಫಿ ವೀಡಿಯೊ ಮಾಡಿ ವಿಕೃತಿ ಮೆರೆದ ಘಟನೆ ಹಾಸನದಲ್ಲಿ ನಡೆದಿದೆ.
ನಗರದ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಮೆಕಾನಿಕ್ ಆಗಿರುವ ಹೂವಿನಹಳ್ಳಿ ಕಾವಲು ಗ್ರಾಮದ ಕೀರ್ತಿ (22) ಕೊಲೆಯಾಗಿದ್ದು, ಹಾಸನ ಜಿಲ್ಲೆ ಆಲೂರು ಮೂಲದ ಆಟೋ ಚಾಲಕ ಉಲ್ಲಾಸ್ ನಾನೇ ಕೊಲೆ ಮಾಡಿದ್ದಾಗಿ ಸೆಲ್ಫಿ ವೀಡಿಯೋ ಮಾಡಿದ್ದಾನೆ. ಈತನ ಜೊತೆ ಸಹಚರರು ಇದ್ದರು ಎಂದು ಶಂಕಿಸಲಾಗಿದೆ.
ನಾವೇ ಇವನನ್ನು ಹೊಡೆದು ಕೊಂದಿದ್ದೇವೆ ಎಂದು ಶವದೊಂದಿಗೆ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋವನ್ನು ಆಧರಿಸಿ ಸ್ಥಳಕ್ಕೆ ಶ್ವಾನದಳ, ಎಎಸ್‌ಪಿ ಭೇಟಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
ರೀಲ್ಸ್ ಮಾಡುತ್ತಾ ಸ್ನೇಹಿತರ ಜೊತೆ ಸುತ್ತಾಡ್ತಾ ಇದ್ದವನು ಸೋಮವಾರ ರಾತ್ರಿ ಬಹಳ ಸಮಯ ಕಳೆದರೂ ಮನೆಗೆ ಬಂದಿಲ್ಲ ಏನಾಯ್ತು ಎಂದು ಎಲ್ಲರೂ ಆತಂಕದಲ್ಲಿರುವಾಗ ಬೆಳಿಗ್ಗೆ ವೀಡಿಯೋ ವೊಂದು ವೈರಲ್ ಆಗಿದೆ.
ಈ ವೀಡಿಯೋ ಜಾಡು ಹಿಡಿದು ತನಿಖೆಗಿಳಿದ ಪೊಲೀಸರಿಗೆ ಕೊಲೆಯಾಗಿದ್ದು ಓರ್ವ ಮೆಕ್ಯಾನಿಕ್. ಕೊಲೆ ಮಾಡಿದ್ದು ಆಟೋ ಚಾಲಕ ಎನ್ನುವುದು ಗೊತ್ತಾಗಿದೆ. ಒಟ್ಟಿಗೆ ಹೋಗಿ ಪಾರ್ಟಿ ಮಾಡಿ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ.
ಕೊಲೆ ಮಾಡಿದ ಬಳಿಕ ಮನುಷ್ಯತ್ವ ಮರೆತ ಕ್ರೂರಿಯೊಬ್ಬ ನಾವು ಹೊಡೆದಿದ್ದೇವೆ. ನಾವು ಇವನನ್ನ ಸಾಯಿಸಿದ್ದೇವೆ ಎಂದು ವಿಕೃತ ಆನಂದಪಟ್ಟಿದ್ದಾರೆ. ಇನ್ನು ಮತ್ತೊಂದು ವೀಡಿಯೋದಲ್ಲಿ ಹೇಯ್ ನಿಂತ್ಕೊಳ್ರೋ ನಾವು ದೊಡ್ಡದಾಗಿ ಬೆಳೆದು, ನಾವೂ ದೊಡ್ಡವರಾದ್ವಿ ಎಂದು ಹೇಳುತ್ತಾ ಕೊಲೆಯನ್ನ ಸಂಭ್ರಮಿಸಿದ್ದಾರೆ.ಕೊಲೆ ಮಾಡಿ ನಾವು ದೊಡ್ಡವರಾದ್ವಿ ನಾವೂ ಬೆಳೆದ್ವಿ ಎಂದು ಹೇಳುತ್ತಾ ಅಟ್ಟಹಾಸ ಮೆರೆದಿದ್ದಾರೆ. ಗಾಂಜಾ ಅಮಲಿನಲ್ಲಿ ಪುಂಡರ ರಾಕ್ಷಸೀ ಕೃತ್ಯ ಎಸಗಿದ್ದಾರೆ. ಹೀಗಾಗಿ ಈ ಹತ್ಯೆ ವಿಡಿಯೋ ಹಾಸನದಾದ್ಯಂತ ವೈರಲ್ ಆಗಿದ್ದು, ಜನರನ್ನ ಬೆಚ್ಚಿಬೀಳೀಸಿದೆ.
ವಿಡಿಯೋ ಮಾಡಿದವನ ಗುರುತು ಪತ್ತೆ
ಅಷ್ಟಕ್ಕೂ ವೀಡಿಯೋ ಮಾಡಿರುವುದು ಉಲ್ಲಾಸ್ ಎಂದು ತಿಳಿದುಬಂದಿದೆ. ಆಟೋ ಚಾಲಕನಾಗಿರುವ ಈತ ಹಾಸನ ಜಿಲ್ಲೆ ಆಲೂರು ಮೂಲದವನು ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಉಲ್ಲಾಸ್ ಹಾಗು ಕೀರ್ತಿ ಎಲ್ಲರೂ ಪರಿಚಿತರಾಗಿದ್ದು, ಸೋಮವಾರ ಕೂಡ ಒಟ್ಟಿಗೆ ಇದ್ದವರು ಒಟ್ಟಿಗೆ ಪಾರ್ಟಿ ಮಾಡಿದ್ದಾರೆ. ಆದರೆ ಬಳಿಕ ಜೊತೆಗೆ ಬಂದವನನ್ನು ಬಡಿದು ಕೊಂದು ಶವದ ಎದುರು ವೀಡಿಯೋ ಮಾಡಿದ್ದಾರೆ.
ಕೊಲೆ ಮಾಡಿ ವೀಡಿಯೋ ಮಾಡಿರುವ ಪಾತಕಿ ಉಲ್ಲಾಸ್ ಒಂದು ವೀಡಿಯೋದಲ್ಲಿ ತಾನೊಬ್ಬನೇ ಇದ್ದರೆ ಇನ್ನೊಂದು ವೀಡಿಯೋದಲ್ಲಿ ಮತ್ತಿಬ್ಬಬರು ಇರುವುದನ್ನ ತೋರಿಸಿದ್ದಾನೆ. ಜೊತೆಗೆ ತೆರಳಿದ್ದ ಯುವಕರ ಗುಂಪಿನ ನಡುವೆ ಗಲಾಟೆ ನಡೆದು ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದ್ದು, ಹಾಸನ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


