ಬೆಂಗಳೂರಿನಲ್ಲಿ 57 ವರ್ಷದ ಮಹಿಳೆಯನ್ನು 6 ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ 31.83 ಕೋಟಿ ರೂ.ವನ್ನು ಸೈಬರ್ ವಂಚಕರು ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
2024ರ ಸೆಪ್ಟೆಂಬರ್ 15ರಂದು ಡಿಹೆಚ್ಎಲ್ ಕೊರಿಯರ್ ಕಂಪನಿಯ ಪ್ರತಿನಿಧಿ ಸೋಗಿನಲ್ಲಿ ಕರೆ ಮಾಡಿದ ವಂಚಕ ‘ನಿಮ್ಮ ಹೆಸರಿನಲ್ಲಿ ಮೂರು ಕ್ರೆಡಿಟ್ ಕಾರ್ಡ್‌ಗಳು, ನಾಲ್ಕು ಪಾಸ್‌ಪೋರ್ಟ್‌ಗಳು ಮತ್ತು ನಿಷೇಧಿತ ಎಂಡಿಎಂ ಮಾದಕ ದ್ರವ್ಯಗಳನ್ನೊಳಗೊಂಡಿದ್ದ ಪ್ಯಾಕೇಜ್ ಮುಂಬೈನ ಅಂಧೇರಿಯಲ್ಲಿರುವ ಕೊರಿಯರ್ ಕೇಂದ್ರಕ್ಕೆ ಬಂದಿದೆ’ ಎಂದು ಹೇಳಿದ್ದಾನೆ.
‘ತಾವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಪ್ಯಾಕೇಜ್‌ಗೂ ತಮಗೂ ಸಂಬಂಧವಿಲ್ಲ’ ಎಂದು ದೂರುದಾರ ಮಹಿಳೆ ಹೇಳಿದ್ದಾರೆ. ಆದರೆ ‘ಫೋನ್ ಸಂಖ್ಯೆ ಪ್ಯಾಕೇಜ್‌ಗೆ ಲಿಂಕ್ ಆಗಿರುವುದರಿಂದ ಇದು ಸೈಬರ್ ಅಪರಾಧವಾಗಿರಬಹುದು’ ಎಂದು ವಂಚಕ ಹೇಳಿದ್ದ.
ಸೈಬರ್ ಅಪರಾಧ ಸೆಲ್ಗೆ ದೂರು ನೀಡುವಂತೆ ಮಹಿಳೆಗೆ ಹೇಳಿದ್ದಾನೆ. ಮತ್ತು ದೂರುದಾರ ಮಹಿಳೆ ಪ್ರತಿಕ್ರಿಯಿಸುವುದಕ್ಕೂ ಮುನ್ನವೇ ಕರೆಯನ್ನ ಸಿಬಿಐ ಅಧಿಕಾರಿಯ ಸೋಗಿನಲ್ಲಿರುವ ವ್ಯಕ್ತಿಗೆ ವರ್ಗಾಯಿಸಿದ್ದಾನೆ. ನಂತರ ಮಹಿಳೆಯ ವಿವರಗಳನ್ನು ಪಡೆದುಕೊಂಡ ವಂಚಕರು, ಆಕೆಯ ಮೇಲೆ ನಿಗಾ ಇರಿಸಿರುವುದಾಗಿ ಬೆದರಿಸಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಯಾರಿಗಾದರೂ ಈ ಕುರಿತು ಮಾಹಿತಿ ನೀಡಿದರೆ ನಿಮ್ಮ ಕುಟುಂಬವನ್ನೂ ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೆದರಿಸಿದ್ದಾರೆ.
ಮಗನ ಮದುವೆ ಸಮೀಪಿಸುತ್ತಿದ್ದರಿಂದ ಆತಂಕಗೊಂಡಿದ್ದ ಮಹಿಳೆ, ವಂಚಕರು ಹೇಳಿದಂತೆ ನಡೆದುಕೊಂಡಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಸಿಬಿಐ ಅಧಿಕಾರಿ ಪ್ರದೀಪ್ ಸಿಂಗ್ ಎಂದು ಹೇಳಿಕೊಂಡು ವಿಡಿಯೋ ಕರೆ ಮಾಡಿದ್ದ ವ್ಯಕ್ತಿಯೋರ್ವ ‘ಡಿಜಿಟಲ್ ಅರೆಸ್ಟ್’ ಮಾಡುತ್ತಿರುವುದಾಗಿ ಮಹಿಳೆಗೆ ಹೆದರಿಸಿದ್ದ.
ನಂತರ ರಾಹುಲ್ ಯಾದವ್ ಎಂಬ ಇನ್ನೊಬ್ಬ ವ್ಯಕ್ತಿಗೆ ಒಂದು ವಾರದ ಕಾಲ ಮಹಿಳೆಯನ್ನ ಮೇಲ್ವಿಚಾರಣೆ ಮಾಡಲು ನಿಯೋಜಿಸಿದ್ದಾನೆ. ಈ ಸಮಯದಲ್ಲಿ ತಾವು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವುದಾಗಿ ದೂರುದಾರೆ ವಿವರಿಸಿದ್ದಾರೆ.
2024ರ ಸೆಪ್ಟೆಂಬರ್ 23ರಂದು, ಆರ್‌ಬಿಐನ ಹಣಕಾಸು ಗುಪ್ತಚರ ಘಟಕ (ಎಫ್‌ಐಯು)ಕ್ಕೆ ಆಸ್ತಿಗಳನ್ನು ಘೋಷಿಸುವಂತೆ ಮಹಿಳೆಗೆ ಪ್ರದೀಪ್ ಸಿಂಗ್ ಸೂಚಿಸಿದ್ದಾನೆ. ಅದರಂತೆ ಮಹಿಳೆ ನಡೆದುಕೊಂಡಿದ್ದರು. ನಂತರ ವಂಚಕರು ಹಂತಹಂತವಾಗಿ ಹಣ ವಸೂಲಿ ಮಾಡಿದ್ದಾರೆ.
ವಂಚಕರ ಸೂಚನೆಯಂತೆ ಸಂತ್ರಸ್ತೆ ತನ್ನ FD ಹಣವನ್ನ ಹೊರತುಪಡಿಸಿ ಇತರ ಉಳಿತಾಯ ಹಣ 31.83 ಕೋಟಿ ರೂ.ಗಳನ್ನು ಸುಮಾರು 187 ವಹಿವಾಟುಗಳಲ್ಲಿ ವಂಚಕರಿಗೆ ವರ್ಗಾಯಿಸಿದ್ದರು. ವರ್ಗಾಯಿಸಿದ ಹಣವನ್ನು 2025ರ ಫೆಬ್ರವರಿಯೊಳಗೆ ಪರಿಶೀಲನೆ ಮಾಡಿ ಹಿಂತಿರುಗಿಸಲಾಗುವುದು ಎಂದು ವಂಚಕರು ಮಹಿಳೆಗೆ ನಂಬಿಸಿದ್ದರು. ಅಲ್ಲದೇ ಮಹಿಳೆಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೂಡ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಣವನ್ನು ಮರಳಿಸದೇ ವಂಚಕರು ಕಾರಣ ನೀಡಲಾರಂಭಿಸಿದಾಗ ಅನುಮಾನಗೊಂಡ ಮಹಿಳೆಯು ಬೆಂಗಳೂರು ಪೂರ್ವ ವಿಭಾಗದ ಸೈಬರ್ ಕ್ರೈಮ್ ಪೊಲೀಸರಿಗೆ 2025ರ ನವೆಂಬರ್ 14ರಂದು ದೂರು ನೀಡಿದ್ದರು. ಅದರಂತೆ ಎಫ್ಐಆರ್ ದಾಖಲಿಸಿರುವ ಪೊಲೀಸರು, ಇದೀಗ ತನಿಖೆ ಆರಂಭಿಸಿದ್ದಾರೆ. ಮಗನ ಮದುವೆ ಮತ್ತು ಇತರ ಕಾರಣಗಳಿಂದ ಹೆದರಿ ದೂರು ದಾಖಲಿಸುವುದು ವಿಳಂಬವಾಗಿದೆ ಎಂದು ದೂರುದಾರೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


