ಚಿನ್ನು ಲವ್ ಯೂ, ಯೂ ಲವ್ ಮೀ ಎಂದು ಪೊಲೀಸ್ ಇನ್ ಸ್ಪೆಕ್ಟರ್ ಗೆ ರಕ್ತದಲ್ಲಿ ಪತ್ರ ಬರೆದು ಕಾಟ ನೀಡುತ್ತಿದ್ದ ಮಹಿಳೆಯನ್ನು ಬಂಧಿಸಿದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಇನ್ ಸ್ಪೆಕ್ಟರ್ ಸತೀಶ್ ಜಿಜೆ ಅವರ ಬೆನ್ನು ಬಿದ್ದ ವನಜಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.
ರಕ್ತದಲ್ಲಿ ಪ್ರೇಮ ಪತ್ರ ಬರೆದಿದ್ದ ವನಜಾ ಪ್ರೀತಿಸುವಂತೆ ಬೆನ್ನು ಬಿದ್ದಿದ್ದಳು. ತನ್ನ ಜೊತೆ ಸಂಬಂಧ ಬೆಳೆಸುವಂತೆ ಆಕೆಯ ಕಿರುಕುಳ ತಾಳಲಾರದೇ ಸತೀಶ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ.
ಆಗಸ್ಟ್ 19ರಂದು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿ ಬಂದ್ದ ಸತೀಶ್ ಅವರಿಗೆ ಅಕ್ಟೋಬರ್ 10ರಂದು ಪದೇಪದೆ ತಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಪ್ ಕರೆ ಬರುತ್ತಿತ್ತು. ವಿಚಾರಿಸಿದಾಗ ಸಂಜನಾ ಅಲಿಯಾಸ್ ವನಜಾ ಎಂದು ಮಹಿಳೆ ಪರಿಚಯಿಸಿಕೊಂಡಿದ್ದಾಳೆ.
ನಾನು ನಿಮ್ಮನ್ನು ಪ್ರೀತಿಸುತ್ತಿದ್ದು, ನೀವು ನನ್ನನ್ನು ಪ್ರೀತಿಸಿ. ನನ್ನ ಜೊತೆ ಸಂಬಂಧ ಬೆಳೆಸಿ ಎಂದು ವನಜಾ ಪದೇಪದೇ ಕರೆ ಮಾಡಿ ಬೇಡಿಕೆ ಇಟ್ಟಿದ್ದಾಳೆ. ಆರಂಭದಲ್ಲಿ ಯಾರೋ ನಕಲಿ ಕರೆ ಎಂದು ಭಾವಿಸಿ ಕಡೆಗಣಿಸಿದ್ದಾರೆ. ಆದರೆ ಆಕೆ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಲು ಆರಂಭಿಸಿದ್ದಾರೆ.
ಸಿಎಂ, ಡಿಸಿಎಂ ಕಚೇರಿಯಿಂದ ಕರೆ ಮಾಡಿಸಿದ್ದ ಮಹಿಳೆ!
ವನಜಾಳ ಸುಮಾರು 11 ಮೊಬೈಲ್ ಸಂಖ್ಯೆಗಳನ್ನು ಬ್ಲಾಕ್ ಮಾಡಿದ್ದರೂ ಆಕೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿ ಪ್ರೀತಿಸುವಂತೆ ಒತ್ತಡ ಹೇರಿದ್ದಾಳೆ. ನನಗೆ ಸಿಎಂ ಮತ್ತು ಡಿಸಿಎಂ ಪರಿಚಯ ಇದ್ದು ನಾನು ಕಾಂಗ್ರೆಸ್ ಕಾರ್ಯಕರ್ತೆ ಆಗಿದ್ದೇನೆ ಎಂದು ಮಾಜಿ ಸಚಿವರಾದ ಮೊಟಮ್ಮ, ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗಿರುವ ಫೋಟೊಗಳನ್ನು ಕಳುಹಿಸಿದ್ದಾಳೆ.
ನನ್ನನ್ನು ಪ್ರೀತಿಸದೇ ಇದ್ದರೆ ರಾಜಕೀಯ ಪ್ರಭಾವ ಬೀರಿ ವರ್ಗಾವಣೆ ಅಥವಾ ಅಮಾನತು ಮಾಡಿಸುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ.
ಕೊನೆಗೆ ಸಿಎಂ ಮತ್ತು ಡಿಸಿಎಂ ಕಚೇರಿಯಿಂದ ಕರೆ ಮಾಡಿಸಿದ್ದಾಳೆ. ಮಹಿಳೆಯ ಕರೆ ಯಾಕೆ ಸ್ವೀಕರಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಸತೀಶ್, ಆಕೆ ಯಾವುದೇ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿಲ್ಲ. ಅಲ್ಲದೇ ಪದೇಪದೆ ಕರೆ ಮಾಡಿ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸತೀಶ್ ಹೇಳಿದ ನಂತರ ಆಕೆ ಸ್ವತಃ ಪೊಲೀಸ್ ಠಾಣೆಗೆ ಬಂದಿದ್ದು, ನಾನು ಅವರ ಸಂಬಂಧಿ ಎಂದು ಬೊಕ್ಕೆ, ಹೂವು, ಸ್ವೀಟ್ಸ್ ತಂದಿದ್ದಳು. ಆದರೆ ಆ ಸಮಯದಲ್ಲಿ ಸತೀಶ್ ಠಾಣೆಯಲ್ಲಿ ಇರಲಿಲ್ಲ. ನಂತರ ಆಕೆಗೆ ಎಚ್ಚರಿಕೆ ನೀಡಿ ವಾಪಸ್ ಕಳುಹಿಸಲಾಯಿತು.
ನಂತರ ಆಕೆ ಮೂರು ಎನ್ ವಲಪ್ ಕವರ್ ಕಳಹಿಸಿದ್ದು, ಒಂದರಲ್ಲಿ ರಕ್ತದಲ್ಲಿ ಬರೆದ ಪತ್ರ, ಮತ್ತೊಂದರಲ್ಲಿ ನೆಕ್ಸಿಟೊ ಪ್ಲಸ್ ಹೆಸರಿನ 20 ಮಾತ್ರೆಗಳು ಇದ್ದವು, ನನ್ನ ಪ್ರೇಮ ಪ್ರಸ್ತಾಪ ಒಪ್ಪಿಕೊಳ್ಳದೇ ಇದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕೆ ಬೆದರಿಕೆ ಹಾಕಿದ್ದಾಳೆ.
ಡಿಸೆಂಬರ್ 12ರಂದು ಏಕಾಏಕಿ ಪೊಲೀಸ್ ಠಾಣೆಗೆ ಆಗಮಿಸಿದ ಮಹಿಳೆ ತನ್ನನ್ನು ಪ್ರೀತಿಸುವಂತೆ ಕಿರುಚಾಡಿದ್ದಾಳೆ. ಪ್ರೀತಿಸದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ಥೇನೆ. ಅಲ್ಲದೇ ಸಮಾಜದಲ್ಲಿ ತಲೆ ಎತ್ತದಂತೆ ಗೌರವ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.
ಇದರಿಂದ ಬೇಸತ್ತ ಸತೀಶ್ ಆಕೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಆತ್ಮಹತ್ಯೆ ಬೆದರಿಕೆ, ಗೌರವಕ್ಕೆ ಧಕ್ಕೆ ತರುವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಸೆಕ್ಷನ್ ಅಡಿ ದೂರು ದಾಖಲಿಸಿಕೊಂಡು ಬಂಧಿಸಲಾಗಿದೆ.


