ಮಂಗಳೂರಿನ ಕೋಟೆಕಾರ್ ಬ್ಯಾಂಕ್ ನಲ್ಲಿ 12 ಕೋಟಿ ಚಿನ್ನಾಭರಣ ಮತ್ತು ನಗದು ದೋಚಿದ ದರೋಡೆಕೋರರ ಪೈಕಿ ಮೂವರನ್ನು ಬಂಧಿಸಲಾಗಿದೆ.
ಬಂಧಿತ ಮೂವರು ತಮಿಳುನಾಡಿನ ತಿರುವನ್ನೆಲ್ಲಿ ನಿವಾಸಿಗಳಾಗಿದ್ದು, ದರೋಡೆ ಮಾಡಿ ಕೇರಳ ಮೂಲಕ ತಮಿಳುನಾಡಿಗೆ ಪರಾರಿಯಾಗಿದ್ದರು.
ಜನವರಿ 17 ರಂದು ಉಳ್ಳಾಲ ರಸ್ತೆಯ ಕೆಸಿ ರಸ್ತೆಯ ಕೋಟೆಕಾರ್ ಬ್ಯಾಂಕ್ ಗೆ ನುಗ್ಗಿದ ೫ ಮಂದಿ ದರೋಡೆಕೋರರು 5 ನಿಮಿಷದಲ್ಲಿ 12 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು.
5 ಮಂದಿ ದರೋಡೆಕೋರರ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಬಂಧಿತರು ಬಳಸಿದ್ದ 2 ಪಿಸ್ತೂಲು, ತಲ್ವಾರ್ ಹಾಗೂ ೨ ಚಿನ್ನ ತುಂಬಿಕೊಂಡು ಹೋಗಿದ್ದ ಬ್ಯಾಗ್ ಕೂಡ ವಶಪಡಿಸಿಕೊಳ್ಳಲಾಗಿದ್ದು, ಉಳಿದವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.
ದರೋಡೆ ಆರಂಭದಲ್ಲಿ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ತಾಂತ್ರಿಕ ನೆರವು ಹಾಗೂ ವಾಹನ ಮುಂತಾದ ಮಾಹಿತಿಗಳನ್ನು ಆಧರಿಸಿ ತನಿಖೆ ಆರಂಭಿಸಲಾಗಿತ್ತು. ಬಂಧಿತರ ವಿಚಾರಣೆ ನಡೆಯುತ್ತಿದ್ದು, ಅಲ್ಲದೇ ವಶಪಡಿಸಿಕೊಂಡ ಚಿನ್ನಾಭರಣಗಳ ಮೌಲ್ಯ ಲೆಕ್ಕಾಚಾರ ನಡೆಯುತ್ತಿದೆ ಎಂದು ಅವರು ಹೇಳಿದರು.
ದರೋಡೆಕೋರರು ಮುಂಬೈ ಮೂಲದ ಕಾರಿಗೆ ಬೆಂಗಳೂರು ನೇಮ್ ಪ್ಲೇಟ್ ಬಳಸಿದ್ದು, ಸಾಕಷ್ಟು ಯೋಜನಾಬದ್ಧವಾಗಿ ದರೋಡೆ ಮಾಡಿದ್ದರು. ಸ್ಥಳೀಯ ಪೊಲೀಸರ ಮಾಹಿತಿ ಆಧರಿಸಿ ದರೋಡೆಕೋರರನ್ನು ಬಂಧಿಸಲಾಗಿದ್ದು, ಬಂಧಿತರ ವಿಚಾರಣೆ ನಡೆಯುತ್ತಿದೆ. ಇದಕ್ಕೂ ಮೊದಲು ಎಲ್ಲೆಲ್ಲಿ ಯಾವೆಲ್ಲಾ ಕೃತ್ಯಗಳನ್ನು ಎಸಗಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ವಿವರಿಸಿದರು.