ಅಣ್ಣನ ಮೇಲೆ ಹಲ್ಲೆ ನಡೆಸಿ ತಂಗಿಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ನಡೆದಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಬಿಹಾರ ಮೂಲದ ಮಹಿಳೆ ಮೇಲೆ ಬುಧವಾರ ತಡರಾತ್ರಿ 1.30ರ ಸುಮಾರಿಗೆ ಅತ್ಯಾಚಾರ ನಡೆದಿದ್ದು, ಸಂತ್ರಸ್ತೆಯ ಕಿರುಚಾಟದಿಂದ ಸ್ಥಳೀಯರು ನೆರವಿಗೆ ಧಾವಿಸಿ ಬಂದಿದ್ದು, ಆಶಿಫ್ ಮತ್ತು ಮತ್ತೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಕ್ಕ-ಬಾವನ ಜೊತೆಗೆ ಕೆಲಸಕ್ಕೆ ಕೇರಳಕ್ಕೆ ಹೋಗಿದ್ದ ಸಂತ್ರಸ್ತೆ, ಕೆಲಸ ಮಾಡಲು ಇಷ್ಟವಿಲ್ಲದೇ ಬುಧವಾರ ಎರ್ನಾಕುಲಂನಿಂದ ಬೆಂಗಳೂರಿಗೆ ಬಂದು ಸ್ವಂತ ಊರಿಗೆ ಹೊರಟಿದ್ದರು.
ಸಂತ್ರಸ್ತೆ ಬುಧವಾರ ತಡರಾತ್ರಿ 1:13ಕ್ಕೆ ಕೆಆರ್ಪುರ ರೈಲು ನಿಲ್ದಾಣದಲ್ಲಿ ಇಳಿದಿದ್ದು ಕರೆದುಕೊಂಡು ಹೋಗಲು ಬಂದಿದ್ದ ದೊಡ್ಡಮ್ಮನ ಮಗನ ಜೊತೆ ಊಟ ಮಾಡಲು ಮಹದೇವಪುರ ಕಡೆಗೆ ಹೋಗುತ್ತಿದ್ದರು.
ಈ ವೇಳೆ ದಿಢೀರನೆ ಇಬ್ಬರು ಅಪರಿಚಿತ ಯುವಕರು ಬಂದಿದ್ದು, ಸಂತ್ರಸ್ತೆಯ ಅಣ್ಣನ ಮೇಲೆ ಹಲ್ಲೆ ನಡೆಸಿ ಸಂತ್ರಸ್ತೆಯ ಕೈಗಳನ್ನು ಬಿಗಿಯಾಗಿ ಹಿಡಿದು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ.
ಮಹದೇವಪುರ ಪೊಲೀಸ್ ಠಾಣೆಗೆ ಪೊಲೀಸ್ ಕಮಿಷನರ್ ದಯಾನಂದ್ ಭೇಟಿ ನೀಡಿದ್ದು, ವೈಟ್ ಫೀಲ್ಡ್ ಡಿಸಿಪಿ ಶಿವಕುಮಾರ್ ಗುಣಾರೆಯಿಂದ ಕೃತ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮಹದೇವಪುರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.


