ಸೌತೆಕಾಯಿ ವಿಷಯದಲ್ಲಿ ನಡೆದ ಜಗಳದಲ್ಲಿ ಅಣ್ಣ ತಂಗಿಯ ಕತ್ತು ಕೊಯ್ದು ಕೊಲೆ ಮಾಡಿದ ಆಘಾತಕಾರಿ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಕೊಳ್ಳೆಗಾಲದ ಈದ್ಗಾ ಮೊಹಲ್ಲಾದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದ್ದು, ಐಮಾನ್ ಬಾನು ಅವರನ್ನು ಅಣ್ಣ ಫರ್ಮಾನ್ ಪಾಷಾ ಕೊಲೆ ಮಾಡಿದ್ದಾನೆ.
ಬುಧವಾರ ರಾತ್ರಿ ಊಟ ಮಾಡುತ್ತಿದ್ದಾಗ ಐಮಾನ್ ಬಾನು ಸೌತೆಕಾಯಿ ಕತ್ತರಿಸಿ ಅಣ್ಣನ ಮಗುವಿಗೆ ತಿನ್ನಿಸಲು ಮುಂದಗಿದ್ದಳು. ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಸೌತೆಕಾಯಿ ಕೊಡಬೇಡ ಎಂದು ಫರ್ಮಾನ್ ಹೇಳಿದ್ದಾನೆ. ಈ ವಿಷಯದಲ್ಲಿ ಐಮಾನ್ ಅಣ್ಣನ ಮೇಲೆ ರೇಗಿದ್ದಾಳೆ.
ಕ್ಷುಲಕ ವಿಷಯಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಫರ್ಮಾನ್ ಮಾಂಸ ಕತ್ತರಿಸುವ ಮಚ್ಚು ತಂದು ತಂಗಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಅತ್ತಿಗೆ ಹಾಗೂ ತಂದೆಯ ಮೇಲೂ ಫರ್ಮಾನ್ ಹಲ್ಲೆ ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.
ಗಲಾಟೆಯ ಸದ್ದು ಕೇಳಿ ಕೆಳಗೆ ಬಂದ ತಂದೆ ಸೈಯದ್ ಪಾಷಾ ಮೇಲೂ ಫರ್ಮಾನ್ ಹಲ್ಲೆ ನಡೆಸಿದಾಗ ಚೀರಾಟ ಕೂಗಾಟ ಕೇಳಿ ಸ್ಥಳೀಯರು ಬರುತ್ತಿದ್ದಂತೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ.
ನಂತರ 112ಗೆ ಕರೆ ಮಾಡಿ ಪೊಲೀಸರನ್ನು ಮನೆಗೆ ಕರೆಸಿಕೊಂಡು ಫರ್ಮಾನ್ ಶರಣಾಗಿದ್ದಾನೆ. ಗಂಭೀರ ಗಾಯಗೊಂಡ ಇಬ್ಬರನ್ನೂ ಚಾಮರಾಜನಗರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕೊಳ್ಳೇಗಾಲ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿಚಾರಣೆ ನಡೆಸಿದ್ದಾರೆ.