ಮಗಳ ಮೇಲೆ ಕಣ್ಣು ಹಾಕಿದ ಪತಿಯನ್ನು ತುಂಡಾಗಿ ಕತ್ತರಿಸಿದ ಪತ್ನಿ ಶವವನ್ನು ಬಿಸಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ನಿವಾಸಿ ಶ್ರೀಮಂತ ಇಟ್ನಾಳೆ ಹತ್ಯೆ ಆಗಿದ್ದು, ಕಲ್ಲಿನಿಂದ ಜಜ್ಜಿ ಕೊಲೆಗೈದ ಪತ್ನಿ ಸಾವಿತ್ರಿಯನ್ನು ಬಂಧಿಸಲಾಗಿದೆ.
ಪತ್ನಿ ದೈಹಿಕ ಸಂಪರ್ಕಕ್ಕೆ ಒಪ್ಪಲಿಲ್ಲ ಅಂತ ಮಗಳ ಮೇಲೆ ಮುಗಿಬಿದ್ದ ಪತಿಯ ವಿಕೃತಿ ಸಹಿಸಲು ಆಗದ ಸಾವಿತ್ರಿ ಪತಿಯನ್ನು ಕೊಂದು ಗುರುತು ಸಿಗಬಾರದು ಎಂದು ಎರಡು ತುಂಡುಗಳಾಗಿ ಕತ್ತರಿಸಿ ಗದ್ದೆಯಲ್ಲಿ ಬಿಸಾಡಿದ್ದಾಳೆ.
ಚಿಕ್ಕ ಬ್ಯಾರೆಲ್ನಲ್ಲಿ ಶವವನ್ನು ಹಾಕಿ ಪಕ್ಕದ ಗದ್ದೆಗೆ ಎಸೆದು ಬಂದ ಸಾವಿತ್ರಿ ನಂತರ ಜಾಗವನ್ನು ಸ್ವಚ್ಛಗೊಳಿಸಿದ್ದಾರೆ. ನಂತರ ಸ್ನಾನ ಮಾಡಿ ಬಟ್ಟೆಗಳನ್ನೆಲ್ಲಾ ಸುಟ್ಟುಹಾಕಿ ಗುರುತು ಸಿಗದಂತೆ ಮಾಡಲು ಪ್ರಯತ್ನಿಸಿದ್ದಾರೆ.
ಕೊಲೆ ಮಾಡಲು ಬಳಸಿದ್ದ ಕಲ್ಲನ್ನು ತೊಳೆದು ಶೆಡ್ಡಿನಲ್ಲಿ ಬಚ್ಚಿಟ್ಟಿದ್ದು, ಗಂಡನ ಮೊಬೈಲ್ ಫೋನನ್ನು ಕೂಡ ಸ್ವಿಚ್ ಆಫ್ ಮಾಡಿ ಇಟ್ಟಿದ್ದಾರೆ. ಎಚ್ಚರವಾಗಿದ್ದ ಮೊದಲ ಮಗಳಿಗೆ ಯಾರ ಬಳಿಯೂ ಹೇಳದಂತೆ ತಾಕೀತು ಮಾಡಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ನೋಡಿದ್ದಾರೆ.
ಜಮೀನಿನಲ್ಲಿ ಶವ ನೋಡಿ ಸ್ಥಳೀಯರು ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಇಟ್ನಾಳೆ ಪತ್ನಿಯ ಮೇಲೆ ಅನುಮಾನ ಬಂದಿದ್ದು ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ವಿವರಗಳು ಹೊರಬಿದ್ದಿವೆ.
ಕುಡಿಯಲು ಹಣಕೊಡಬೇಕು, ಬೈಕ್ ಕೊಡಿಸಬೇಕೆಂದು ಕಿರುಕುಳ ನೀಡುತ್ತಿದ್ದ. ಅಲ್ಲದೆ, ಹಣಕ್ಕಾಗಿ ಬೇರೆಯವರ ಜೊತೆ ಮಲಗು ಎಂದು ಒತ್ತಾಯಿಸುತ್ತಿದ್ದ. ಇದೇ ಕಾರಣದಿಂದ ಪರ ಪುರುಷರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದು, ಇದು ವಿಪರೀತಕ್ಕೆ ಹೋಗಿ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಸಹಿಸಲಾಗದೇ ಕೊಲೆ ಮಾಡಿದ್ದಾಗಿ ಸಾವಿತ್ರಿ ಪೊಲೀಸರ ಬಳಿ ವಿವರಿಸಿದ್ದಾರೆ.