ಮನೆ ಕೆಲಸಕ್ಕೆ ಸೇರಿದ 20 ದಿನದಲ್ಲೇ ಕುಟುಂಬದವರು 30 ವರ್ಷಗಳಿಂದ ಸಂಪಾದಿಸಿದ್ದ 18 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದಂಪತಿ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಮಾರತ್ತಹಳ್ಳಿಯ ಯಮಲೂರಿನಲ್ಲಿ ಬಿಲ್ಡರ್ ಶಿವಕುಮಾರ್ ಎಂಬವರ ಮನೆಯಲ್ಲಿ ಲಾಕರ್ ನಲ್ಲಿ ಇರಿಸಲಾಗಿದ್ದ 18 ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ಮತ್ತು ನಗದು ಕಳವು ಮಾಡಲಾಗಿದೆ. 20 ದಿನದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ದಂಪತಿ ದಿನೇಶ್ ಮತ್ತು ಕಮಲಾ ಈ ಕೃತ್ಯ ಎಸಗಿದ್ದು, ಇವರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಭೂಮಿ ಪೂಜೆ ಕಾರ್ಯಕ್ರಮಕ್ಕೆ ಕುಟುಂಬದವರು ತೆರಳಿದ್ದಾಗ ನೇಪಾಳ ಮೂಲದ ದಂಪತಿ ಸಿಸಿಟಿವಿ ಕ್ಯಾಮೆರಾ, ನಿಷ್ಕ್ರಿಯಗೊಳಿಸಿ, ವಿದ್ಯುತ್ ಸಂಪರ್ಕ, ಯುಪಿಎಸ್ ಮತ್ತು ವೈಫೈ ಆಫ್ ಮಾಡಿ ಕಳವು ಮಾಡಿದ್ದಾರೆ.
ದಂಪತಿ ಸೇರಿದಂತೆ ಒಟ್ಟು ಐದು ಮಂದಿ ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದ್ದು, 11.5 ಕೆಜಿ ಚಿನ್ನ, ವಜ್ರ, 5 ಕೆಜಿ ಬೆಳ್ಳಿ ಮತ್ತು 11.5 ಲಕ್ಷ ರೂಪಾಯಿ ನಗದು ಕಳವಾಗಿದೆ.
ಕಳೆದ 32 ವರ್ಷಗಳ ಶ್ರಮದ ಗಳಿಕೆಯಾಗಿದೆ. ಕುಟುಂಬಕ್ಕೆ ಅವನ್ನು ಹಂಚಿಕೆ ಮಾಡಲು ನಿರ್ಧರಿಸಿದ್ದ ದಿನವೇ ಕಳವಾಗಿದೆ. ಮಕ್ಕಳಿಗೆ ಸರ್ಪ್ರೈಸ್ ಆಗಿ ನೀಡಲು ಇಟ್ಟಿದ್ದ ಐಫೋನ್‌ಗಳು ಕೂಡ ಕಳವಾಗಿವೆ ಸೇರಿವೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.
ಮಗಳು ಹಾಗೂ ಸೊಸೆ ಮನೆಯಲ್ಲಿ ಲಾಕರ್ ಇಲ್ಲ. ಮನೆ ಕಟ್ಟುತ್ತಿದ್ದೇವೆ ಎಂಬ ಕಾರಣಕ್ಕೆ ಮನೆಯಲ್ಲಿ ಚಿನ್ನ ತಂದು ಇಟ್ಟಿದ್ದರು. ಆದರೆ ಇದನ್ನೇ ಕದ್ದಿದ್ದಾರೆ. ಲಕ್ಷ್ಮಣ್ ಎಂಬ ವ್ಯಕ್ತಿ ನೇಪಾಳಿ ಮೂಲದ ದಂಪತಿಯನ್ನು ಮನೆ ಕೆಲಸಕ್ಕೆ ಸೇರಿಸಿದ್ದ ಎಂದು ಮನೆಯವರು ಹೇಳಿದ್ಧಾರೆ.
ಅಮೆರಿಕ ದಂಪತಿ ಮನೆಯಲ್ಲಿ ಕದ್ದಿದ್ದ ಆರೋಪಿ ಅರೆಸ್ಟ್
ಅಮೆರಿಕದ ದಂಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪಶ್ಚಿಮ ಬಂಗಾಳ ಮೂಲದ ಕೆಲಸಗಾರ ಮನೆಯಲ್ಲಿ ಕಳ್ಳತನ ನಡೆಸಿದ್ದು, ರಾಯಭಾರ ಕಚೇರಿಗೆಮನೆ ಮಾಲೀಕರು ದೂರು ನೀಡಿದ್ದರ. ಹೀಗಾಗಿ ಅಮೆರಿಕ ರಾಯಭಾರ ಕಚೇರಿ ನೇರವಾಗಿ ಡಿಜಿ, ಐಜಿಪಿಗೆ ದೂರು ನೀಡಿದೆ.
ವರ್ಷದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಚಂದನ್ ರೌಲ್ ಎಂಬಾತ ಮನೆಯಲ್ಲಿದ್ದ ವಜ್ರ, ಚಿನ್ನಾಭರಣ ಸೇರಿ 600 ಅಮೆರಿಕನ್ ಡಾಲರ್ ಕದ್ದಿದ್ದ. ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಸಂಬಂಧ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕಳವು ಮಾಡಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.


