ಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಕೊಲೆ ಆರೋಪಿ ಸುಹಾಸ್ ಶೆಟ್ಟಿ ಕೊಲೆಗೆ ಪ್ರಮುಖ ಆರೋಪಿ ಆದಿಲ್ ಮೆಹಬೂಬ್ 5 ಲಕ್ಷ ರೂ. ಸುಪಾರಿ ನೀಡಿದ್ದ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಮಂಗಳೂರು ಬಜ್ಪೆ ವಿಮಾನ ನಿಲ್ದಾಣ ಬಳಿ ಕೊಲೆಯಾದ ಸುಹಾಸ್ ಶೆಟ್ಟಿ ಪ್ರಕರಣವನ್ನು 24 ಗಂಟೆಯಲ್ಲಿ ಭೇದಿಸಿದ ನಂತರ ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಬಜ್ಪೆಯ ಶಾಂತಿಗುಡ್ಡೆ ನಿವಾಸಿ ಸಫ್ಘಾನ್, ಆದಿಲ್ ಮೆಹಬೂಬ್, ಮೆಹರೂಫ್, ನಾಗರಾಜ್, ರಂಜನ್, ನಿಯಾಜ್, ಮೊಹಮದ್ ರಿಜ್ವಾನ್, ಕಂಫೀಲ್ ಶರೀಫ್ ಅವರನ್ನು ಬಂಧಿಸಲಾಗಿದ್ದು, ಆದಿಲ್ ಮೆಹಬೂಬ್ ಪ್ರಮುಖ ಆರೋಪಿಯಾಗಿದ್ದಾನೆ.
ಸುಹಾಸ್ ಶೆಟ್ಟಿಯನ್ನು 6 ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಕೊಲೆ ಹಿಂದೆ ಇಬ್ಬರು ಬುರ್ಖಾ ಧರಿಸಿದ್ದ ಮಹಿಳೆಯರು ಇದ್ದಾರೆ ಎಂಬುದು ತಿಳಿದು ಬಂದಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಸೇಡು ಎಂದು ಪರಿಗಣಿಸಲು ಆಗುವುದಿಲ್ಲ ಎಂದರು.
ಫಾಝಿಲ್ ನನ್ನು ಸುಹಾಸ್ ಶೆಟ್ಟಿ ಕೊಲೆ ಮಾಡಿದ್ದ. ಅಲ್ಲದೇ 2022ರಲ್ಲಿ ಫಾಝೀಲ್ ಸಹೋದರ ಆದಿಲ್ ಮೆಹಬೂಬ್ ಮೇಲೂ 2003ರಲ್ಲಿ ಹಲ್ಲೆ ಮಾಡಿದ್ದು ಕೊಲೆಗೆ ಯತ್ನಿಸಿದ್ದ. ಎರಡನೇ ಬಾರಿ ದಾಳಿ ನಡೆದಾಗ ಆತಂಕಗೊಂಡ ಆದಿಲ್ ಸಫ್ಘಾನ್ ಗ್ಯಾಂಗ್ ಸಂಪರ್ಕಿಸಿ ಸುಹಾಸ್ ಕೊಲೆಗೆ ಸುಪಾರಿ ನೀಡಿದ್ದ ಎಂದು ಅವರು ತಿಳಿಸಿದರು.
ಸುಫ್ಘಾನ್ ಗ್ಯಾಂಗ್ ಗೆ ಆದಿಲ್ 5 ಲಕ್ಷ ರೂ. ಸುಪಾರಿ ನೀಡಲು ಒಪ್ಪಿಕೊಂಡಿದ್ದು, ಇದಕ್ಕಾಗಿ 3 ಲಕ್ಷ ರೂ. ಮುಂಗಡ ಹಣ ನೀಡಿದ್ದ. ಈ ಹಿನ್ನೆಲೆಯಲ್ಲಿ ಸುಫ್ಘಾನ್ ತಂಡವನ್ನು ರಚಿಸಿ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸ್ ಕಮಿಷನರ್ ವಿವರಿಸಿದ್ದಾರೆ.


