ಬೆಂಗಳೂರು: ಕರ್ನಾಟಕದ ಮಾಜಿ ಡಿಜಿಪಿ ಓಂಪ್ರಕಾಶ್ ಅವರನ್ನು ಬೆಂಗಳೂರಿನ ತಮ್ಮ ಮನೆಯಲ್ಲಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ವಿಚಾರಣೆ ಆರಂಭಿಸಿರುವ ಪೊಲೀಸರು ಊಹಿಸಲು ಆಗದ ಆಘಾತಕಾರಿ ವಿಷಯಗಳು ಕಂಡು ಆಘಾತಕ್ಕೆ ಒಳಗಾಗಿದ್ದಾರೆ.
ನಗರದ ಎಚ್ ಎಸ್ ಆರ್ ಲೇಔಟ್ ನಲ್ಲಿರುವ ತಮ್ಮ ಮನೆಯಲ್ಲಿ ವಾಸವಾಗಿದ್ದ ಓಂಪ್ರಕಾಶ್ ಕೊಲೆಯಾಗಿದ್ದು, ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆಯ ನೆಲಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಓಂಪ್ರಕಾಶ್ ಶವ ಪತ್ತೆಯಾಗಿದೆ. ಓಂಪ್ರಕಾಶ್ ಗೆ 12ರಿಂದ 14 ಬಾರಿ ಇರಿದು ಕೊಲೆ ಮಾಡಲಾಗಿದ್ದು, ಎದೆ, ಕೈ, ಹೊಟ್ಟೆಯ ಮೇಲೆ ಗಾಯದ ಗುರುತುಗಳಿವೆ. ಹೊಟ್ಟೆಗೆ 4ರಿಂದ 5 ಬಾರಿ ಇರಿದಿರುವುದು ತಿಳಿದು ಬಂದಿದೆ.
ಚಾಕುವಿನಿಂದ ಇರಿತಕ್ಕೆ ಒಳಗಾದ ಓಂಪ್ರಕಾಶ್ ನರಳಾಡುತ್ತಿದ್ದರೂ ಪತ್ನಿ ನೋಡುತ್ತಾ ನಿಂತಿದ್ದರು. ನರಳಿ ನರಳಿ ಸತ್ತ ನಂತರ ಮತ್ತೊಮ್ಮ ಪೊಲೀಸ್ ಅಧಿಕಾರಿಯ ಪತ್ನಿಗೆ ಕರೆ ಮಾಡಿ ರಾಕ್ಷಸನನ್ನು ಮುಗಿಸಿದ್ದೇವೆ ಎಂದು ಹೇಳಿರುವುದು ವಿಚಾರಣೆಗೆ ತಿಳಿದುಬಂದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಾಳೆ ವರದಿ ಬರುವ ನಿರೀಕ್ಷೆ ಇದೆ.
ಓಂಪ್ರಕಾಶ್ ಶವದ ಬಳಿ ಚಾಕು ಮತ್ತು ಬಾಟಲಿ ಪತ್ತೆಯಾಗಿದ್ದು, ಇವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಕೊಲೆಯನ್ನು ಪತ್ನಿ ಹಾಗೂ ಮಗಳು ಸೇರಿ ಮಾಡಿದ್ದಾರೆ ಎಂದು ಶಂಕಿಸಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ,
ಆಸ್ತಿ ವಿಚಾರಕ್ಕೆ ಕೊಲೆ
ಆಸ್ತಿಯನ್ನು ಓಂ ಪ್ರಕಾಶ್ ಮಕ್ಕಳ ಹೆಸರಿಗೆ ಮಾಡದೇ ತಂಗಿಯ ಹೆಸರಿಗೆ ಮಾಡಿದ್ದರು ಎಂದು ತಿಳಿದುಬಂದಿದೆ. ತಂಗಿ ಹೆಸರಿನಲ್ಲಿ ಆಸ್ತಿ ಮಾಡಿದ್ದಕ್ಕೆ ಹಲವು ದಿನಗಳಿಂದ ಓಂ ಪ್ರಕಾಶ್ ಮತ್ತು ಅವರ ಪತ್ನಿ ಪಲ್ಲವಿ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ತಂಗಿ ವಿಚಾರವಾಗಿ ಮಾತನಾಡಬೇಡ ಅಂತ ಪತ್ನಿ ಪಲ್ಲವಿ ಅವರಿಗೆ ಓಂಪ್ರಕಾಶ್ ವಾರ್ನ್ ಮಾಡಿದ್ದರಂತೆ. ಈ ವಿಚಾರಕ್ಕೆ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ.
ಓಂ ಪ್ರಕಾಶ್ ಅವರಿಗೆ ಸೇರಿದ ಎರಡು ಮನೆ ಬೆಂಗಳೂರಿನಲ್ಲಿ ಇವೆ. ಕಾವೇರಿ ಜಂಕ್ಷನ್ನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಇದೆ. ಹೆಚ್.ಎಸ್.ಆರ್ ಲೇಔಟ್ನ ಐಪಿಎಸ್ ಕ್ವಾಟ್ರಸ್ನಲ್ಲಿ ಮನೆ ಇದೆ. ಮನೆಯಲ್ಲಿ ಗಲಾಟೆ ಆದಾಗ ಓಂ ಪ್ರಕಾಶ್ ಅವರು ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು ಎಂದು ಮಾಹಿತಿ ದೊರೆತಿದೆ.
ಕೌಟುಂಬಿಕ ಕಲಹಕ್ಕೆ ಕೊಲೆ?
ಮೂರು ದಿನಗಳ ಹಿಂದೆ IPS ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ಪತ್ನಿ ಪಲ್ಲವಿಯವರು, “ನನ್ನ ಪತಿ ನನಗೆ, ಮಗಳಿಗೆ ತುಂಬಾ ಚಿತ್ರಹಿಂಸೆ ಕೊಡುತ್ತಿದ್ದಾರೆ. ಮನೆಯಲ್ಲಿ ನನ್ನ ಪತಿ ಗನ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಶೂಟ್ ಮಾಡಿ ಕೊಲೆ ಮಾಡುತ್ತೇನೆ ಎಂದು ಭಯಪಡಿಸುತ್ತಿದ್ದಾರೆ. ಹೀಗಾಗಿ, ಪತಿ ವಿರುದ್ಧ ಸುಮೊಟೋ ಕೇಸ್ ದಾಖಲಿಸುವಂತೆ ಮೆಸೇಜ್ ಮಾಡಿದ್ದರಂತೆ.ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಶವ ಪತ್ತೆಯಾದ ಜಾಗದ ಸುತ್ತಮುತ್ತ ಕೂಡ ರಕ್ತ ಚೆಲ್ಲಾಡಿದೆ.


