Wednesday, December 24, 2025
Google search engine
Homeಅಪರಾಧದಾವಣಗೆರೆಯಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡ ಸೇರಿ ನಾಲ್ವರು ಅರೆಸ್ಟ್

ದಾವಣಗೆರೆಯಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡ ಸೇರಿ ನಾಲ್ವರು ಅರೆಸ್ಟ್

ಅಕ್ರಮವಾಗಿ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ಕಾಂಗ್ರೆಸ್ ಮುಖಂಡ ಸೇರಿ ನಾಲ್ವರು ಆರೋಪಿಗಳನ್ನು ದಾವಣೆಗೆರೆಯಲ್ಲಿ ಪೊಲೀಸರು ಬಂಧಿಸಿ 10 ಲಕ್ಷ ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ ಮೂಲದ ರಾಮ್ ಸ್ವರೂಪ್ (33), ಧೋಲಾರಾಮ್ (36), ದೇವ್ ಕಿಶನ್ (35) ಹಾಗೂ ದಾವಣಗೆರೆಯ ಶಾಮನೂರು ಗ್ರಾಮದ ನಿವಾಸಿ ವೇದಮೂರ್ತಿ ಎಸ್.ಜಿ. (53) ಬಂಧಿತರು.

ಆರೋಪಿಗಳಿಂದ ಅಂದಾಜು 10 ಲಕ್ಷ ರೂ. ಮೌಲ್ಯದ ಒಟ್ಟು 90 ಗ್ರಾಂ ಎಂಡಿಎಂಎ ಹಾಗೂ 200 ಗ್ರಾಂ ಓಪಿಯಂ ಎಂಬ ದುಬಾರಿ ಮಾದಕ ವಸ್ತುಗಳು, ಮಾರಾಟ ಮಾಡಿದ್ದರಿಂದ ಬಂದ ಒಂದು ಲಕ್ಷ ರೂ. ನಗದು ಹಣ ಸೇರಿದಂತೆ 11 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಸೋಮವಾರ ಮಧ್ಯಾಹ್ನ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜೆ.ಹೆಚ್.ಪಟೇಲ್ ಬಡಾವಣೆಯ ಉದ್ಯಾನವನದಲ್ಲಿ ನಾಲ್ವರು ಅಕ್ರಮವಾಗಿ ಗಾಂಜಾ ಇಟ್ಟುಕೊಂಡು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದರು.

ಆರೋಪಿಗಳ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ರಾಮ್ ಸ್ವರೂಪ್ ಮೇಲೆ ರಾಜಸ್ಥಾನದ ಜೋಧಪುರದಲ್ಲಿ ಎನ್​​ಡಿಪಿಎಸ್ ಹಾಗೂ ಆರ್ಮ್ಸ್ ಆಕ್ಟ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.‌

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಪ್ರಕರಣದಲ್ಲಿ 290 ಗ್ರಾಂ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ. ರಾಮ್‌ ಸ್ವರೂಪ್, ಧೋಲಾರಾಮ್, ದೇವ್ ಕಿಶನ್, ದೇವ್ ಲಾಲ್ ಹಾಗೂ ವೇದಮೂರ್ತಿ ಎಸ್.ಜಿ ಎಂಬವರನ್ನು ಬಂಧಿಸಲಾಗಿದೆ” ಎಂದರು.

“ಸಾರ್ವಜನಿಕವಾಗಿ ಡ್ರಗ್ಸ್​ ಮಾರಾಟ ಮಾಡುತ್ತಿದ್ದರು ಎಂದು ಮಾಹಿತಿ ಬಂದಿದ್ದರಿಂದ ನಾವು ದಾಳಿ ಮಾಡಿದ್ದೇವೆ. ತನಿಖೆ ನಡೆಸಿದ ಬಳಿಕವೇ ಯಾರ ಪಾತ್ರ ಏನಿದೆ ಎಂದು ತಿಳಿದುಬರುತ್ತದೆ. ರಾಮ್ ಸ್ವರೂಪ್, ಧೋಲರಾಮ್ ಇಬ್ಬರು ರಾಜಸ್ಥಾನ ಮೂಲದವರಾಗಿದ್ದು, ಈ ಪ್ರಕರಣದಲ್ಲಿ ಇವರದ್ದು ಪಾತ್ರ ಪ್ರಮುಖವಾಗಿದೆ. ಇನ್ನು ಮೂವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ಇದೆ. ಅವರನ್ನೂ ಬಂಧಿಸಬೇಕಿದೆ‌” ಎಂದು ಹೇಳಿದರು.

“90 ಗ್ರಾಂ ಎಂಡಿಎಂಎ ಹಾಗೂ 200 ಗ್ರಾಂ ಓಪಿಯಂ ಎಂಬ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಗಳ ಮೊಬೈಲ್ ವಶಕ್ಕೆ ಪಡೆದಿದ್ದು, ಬೆಲೆ ದುಬಾರಿಯ ಡ್ರಗ್ಸ್ ಆಗಿರುವ ಇದನ್ನು ಶ್ರೀಮಂತರೇ ಹೆಚ್ಚಾಗಿ ಖರೀದಿಸುತ್ತಿದ್ದರು ಎಂದು ತಿಳಿದುಬಂದಿದೆ. 1 ಗ್ರಾಂ ಡ್ರಗ್ಸ್​ಗೆ 3ರಿಂದ 4 ಸಾವಿರ ರೂಪಾಯಿ ಬೆಲೆ ಇದೆ. ದಾವಣಗೆರೆಯಲ್ಲಿ ಒಂದು ಟಾಸ್ಕ್ ಫೋರ್ಸ್ ಇದ್ದು, ಈ ರೀತಿಯ 8 ಪ್ರಕರಣಗಳನ್ನು ಭೇದಿಸಿದ್ದೇವೆ. ಒಟ್ಟು 23 ಜನರನ್ನು ಇಲ್ಲಿತನಕ ಬಂಧಿಸಿದ್ದೇವೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments