ವಿಜಯಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಿಂದ ದರೋಡೆ ಮಾಡಲಾದ ಚಿನ್ನ ಹಾಗೂ ನಗದು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ.
ಶುಕ್ರವಾರ ಬೆಳಿಗ್ಗೆ ಮಹಾರಾಷ್ಟ್ರದ ಹುಲ್ಲಜಂತಿ ಗ್ರಾಮದಲ್ಲಿ 42 ಲಕ್ಷ ರೂ. ನಗದು ಹಾಗೂ ಚಿನ್ನ ಇದ್ದ 57 ಬ್ಯಾಗ್ ಗಳು ಪತ್ತೆಯಾಗಿವೆ.
ವಿಜಯಪುರದ ಚಡಚಣದ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಹುಲಾಜಂತಿ ಗ್ರಾಮದ ಪಾಳುಬಿದ್ದ ಮನೆಯೊಂದರ ಮೇಲ್ಛಾವಣಿಯಲ್ಲಿ ದರೋಡೆಗೈದ ಚಿನ್ನದ ಆಭರಣಗಳನ್ನು ಪತ್ತೆ ಹಚ್ಚಲಾಗಿದೆ.
ಮಹಾರಾಷ್ಟ್ರದ ಪಂಢರಪುರ ತಾಲ್ಲೂಕಿನ ಹುಲಾಜಂತಿ ಗ್ರಾಮದ ಮನೆಯೊಂದರ ಮೇಲ್ಛಾವಣಿಯಲ್ಲಿ ಬ್ಯಾಗ್ನಲ್ಲಿ ತುಂಬಿದ್ದ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಜಯಪುರ ಪೊಲೀಸರ ವಿಶೇಷ ತಂಡ ಎರಡು ದಿನಗಳ ಹಿಂದೆ ನಡೆದ ಎಸ್ ಬಿಐ ಬ್ಯಾಂಕ್ ದರೋಡೆ ಪ್ರಕರಣದ ತನಿಖೆ ನಡೆಸಿದ್ದು, ಸುಮಾರು 20 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದ ದರೋಡೆಕೋರರ ಬೆನ್ನು ಹತ್ತಿದ್ದರು.
ಮಹಾರಾಷ್ಟ್ರದ ಹುಲ್ಲಜಂತಿ ಗ್ರಾಮದಲ್ಲಿ ಒಂದು ಕಡೆ 1 ಲಕ್ಷ ರೂ. ನಗದು ಹಾಗೂ ಚಿನ್ನ ಇದ್ದ 21 ಬ್ಯಾಗ್ ಪತ್ತೆಯಾದರೆ ಮತ್ತೊಂದು ಕಡೆ 41 ಲಕ್ಷ ರೂ. ನಗದು ಹಾಗೂ ಚಿನ್ನ ಇರಿಸಿದ್ದ 36 ಬ್ಯಾಗ್ ಗಳು ಪತ್ತೆಯಾಗಿವೆ.


