ಮಾತು ಕೇಳದೇ ಪ್ರತಿಯೊಂದು ವಿಷಯಕ್ಕೂ ತಗಾದೆ ತೆಗೆಯುತ್ತಿದ್ದ ಪತ್ನಿಯನ್ನು ಇರಿದು ಕೊಂದ ಪತಿ ನಂತರ ಫೇಸ್ ಬುಕ್ ಲೈವ್ ನಲ್ಲಿ ಕೊಲೆಯ ವಿಷಯವನ್ನು ಘೋಷಿಸಿದ ಘಟನೆ ಕೇರಳದಲ್ಲಿ ನಡೆದಿದೆ.
ಕೂಥನಡಿ ಬಳಿ ಪುನ್ಲೂರಿನಲ್ಲಿ 39 ವರ್ಷದ ಪತ್ನಿ ಶಾಲಿಯನ್ನು 42 ವರ್ಷದ ಐಸಾಕ್ ಕೊಲೆ ಮಾಡಿದ್ದಾನೆ. ಪುನ್ಲೂರ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸೋಮವಾರ ಮುಂಜಾನೆ 6.30ಕ್ಕೆ ಸ್ನಾನಕ್ಕೆ ಹೋದಾಗ ಪತ್ನಿಯನ್ನು ಚಾಕುವಿನಿಂದ ಪತಿ ಇರಿದು ಕೊಂದಿದ್ದಾನೆ. ಕುತ್ತಿಗೆ, ಎದೆ ಮತ್ತು ಬೆನ್ನಿನಲ್ಲಿ ಆಳವಾದ ಇರಿತದಿಂದ ಶಾಲಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಲೆ ಮಾಡಿದ ಕೆಲವೇ ನಿಮಿಷಗಳಲ್ಲಿ ಫೇಸ್ ಬುಕ್ ಲೈವ್ ಗೆ ಬಂದ ಐಸಾಕ್, ಪತ್ನಿಯನ್ನು ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮಹಿಳೆಯ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ.
ಶಾಲಿನಿ ಎಂದಿಗೂ ನನ್ನ ಮಾತನ್ನು ಪಾಲಿಸುತ್ತಿರಲಿಲ್ಲ. ಆಕೆಯ ತಾಯಿಯ ಮನೆ ಸೇರಿದಳು. ಇತ್ತೀಚಿಗೆ ಮನೆಗೆ ಮರಳಿದ ಆಕೆ ನನ್ನನ್ನು ತೊರೆಯುವಂತೆ ಬೇಡಿಕೆ ಇಟ್ಟಿದ್ದಳು. ಜೊತೆಗೆ, ತನ್ನ ಆಭರಣಗಳನ್ನೆಲ್ಲಾ ಸಾಲ ಇಟ್ಟು ವಾಹನ ಖರೀದಿಸಿದ್ದರು. ನನ್ನ ಉದ್ಯೋಗ ಮತ್ತು ರಾಜಕೀಯ ಪಕ್ಷದ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಳು ಎಂದು ಆರೋಪಿ ಪೊಲೀಸರ ಮುಂದೆ ಹೇಳಿದ್ದಾನೆ.
ಈ ಪ್ರಕರಣ ಸಂಬಂಧ ದಂಪತಿಯ 19 ವರ್ಷದ ಮಗ ದೂರು ದಾಖಲಿಸಿದ್ದು, ಬಿಎನ್ಎಸ್ ಸೆಕ್ಷನ್ 103(1) (ಕೊಲೆ) ಅಡಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ಮಾಹಿತಿ ನೀಡಿದ ಪೊಲೀಸರು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಗಲ್ಫ್ನಿಂದ ಮರಳಿದ ಬಳಿಕ ಐಸಾಕ್ ರಬ್ಬರ್ ಟ್ಯಾಪರ್ ಕೆಲಸ ಮಾಡುತ್ತಿದ್ದ. ಶಾಲಿನಿ ಸಮೀಪದ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.
ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವಿಧಿ ವಿಜ್ಞಾನ ತಂಡ ಮನೆಯ ಪರಿಶೀಲನೆ ನಡೆಸಿದ್ದು, ಆರೋಪಿಯ ಎರಡು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದಾರೆ.


