ಬೆಂಗಳೂರು: ಮ್ಯಾಟ್ರಿಮೊನಿಯೋದಲ್ಲಿ ಪರಸ್ಪರ ಪರಿಚಯ ಆಗಿ ಮದುವೆ ಆಗುವ ಭರವಸೆ ನೀಡಿದ ವ್ಯಕ್ತಿ ಯುವತಿಗೆ 60 ಲಕ್ಷ ರೂ. ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೀವನ ಸಾಥಿ ಮ್ಯಾಟ್ರಿಮೊನಿಯೊದಲ್ಲಿ ಪರಿಚಯವಾದ ಯುವತಿಗೆ ಜೀವನ ಸಂಗಾತಿ ಆಗುವೆನೆಂದು ನಂಬಿಸಿದ ಶಿವಲಿಂಗೇಶ್ 60 ಲಕ್ಷ ರೂ. ವಂಚಿಸಿದ್ದಾನೆ.
2022ರ ಡಿಸೆಂಬರ್ ನಲ್ಲಿ ಜೀವನ್ ಸಾಥಿ ಡಾಟ್ ಕಾಂನಲ್ಲಿ ಪರಿಚಯವಾದ ಬಳಿಕ, ಇಬ್ಬರು ಭೇಟಿಯಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಮಧ್ಯೆ ತನ್ನ ತಾಯಿಗೆ ಮೆದುಳಿನ ಸಮಸ್ಯೆ ಇದೆ. ಚಿಕಿತ್ಸೆ ಕೊಡಿಸಬೇಕೆನ್ನುವ ನಾಟಕ ವಾಡಿದ ಶಿವಲಿಂಗೇಶ್ ಯುವತಿಯಿಂದ ಹಂತ ಹಂತವಾಗಿ 60 ಲಕ್ಷ ರೂ ಪಡೆದಿದ್ದಾನೆ.
ಶಿವಲಿಂಗೇಶ್ ನಡವಳಿಕೆ ದಿನೇದಿನೇ ಬದಲಾಗುತ್ತಿರುವುದರಿಂದ ಅನುಮಾನಗೊಂಡ ಸಂತ್ರಸ್ತ ಯುವತಿ ಆತನ ಹಿನ್ನಲೆ ಪರಿಶೀಲಿಸಿದಾಗ ಇದೇ ರೀತಿ ಬೇರೆಯವರಿಂದಲೂ ಹಣ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ.
ಲಿಂಕ್ಡ್ ಇನ್‌ನಲ್ಲಿ ಆರೋಪಿ ಬಗ್ಗೆ ಮಾಹಿತಿ ಕಲೆಹಾಕಿದಾಗ ಆರೋಪಿ ಶಿವಲಿಂಗೇಶ್ ಕ್ಯಾಸಿನೋ ಚಟಕ್ಕೆ ಬಿದಿದ್ದು, ಈ ಸಂಬಂಧ ಹಲವರಿಂದ ಹಣ ಪಡೆದು ವಂಚಿಸಿದ್ದಾನೆ ಎಂದು ಆತನ ಕುಟುಂಬಸ್ಥರೇ ಪೋಸ್ಟ್ ಹಾಕಿರುವುದು ಕಂಡು ಶಾಕ್ ಆಗಿದ್ದಾರೆ.
ಪೋಸ್ಟ್‌ನಲ್ಲಿ ಏನಿತ್ತು?
ಆರೋಪಿ ಶಿವಲಿಂಗೇಶ್ ಕ್ಯಾಸಿನೋ ಚಟಕ್ಕೆ ಬಿದ್ದಿದ್ದು ಸುಳ್ಳು ಹೇಳಿ ಎಲ್ಲರಿಂದ ಹಣ ವಸೂಲಿ ಮಾಡುತ್ತಿದ್ದಾನೆ. ನನ್ನ ತಾಯಿಗೆ ಹಾರ್ಟ್ ಸರ್ಜರಿ, ಬ್ರೇನ್ ಸರ್ಜರಿ, ಮೆಡಿಕಲ್ ಎಮರ್ಜೆನ್ಸಿ ಇದೆ. ನಾನು ಒಂದು ಭೂಮಿ ಖರೀದಿಸಿದ್ದು, ಮುಂಗಡ ಹಣ ನೀಡಬೇಕಾಗಿದೆ. ಅಲ್ಲದೇ, ನನ್ನ ಬ್ಯಾಂಕ್ ಖಾತೆ ಸಮಸ್ಯೆಯಾಗಿದ್ದು, ತುರ್ತಾಗಿ ನನ್ನ ತಾಯಿಗೆ ಹಣ ಕಳುಹಿಸಬೇಕಾಗಿದೆ ಎಂದು ಸುಳ್ಳು ಹೇಳಿ ಹಣ ಪಡೆಯುತ್ತಿದ್ದಾನೆ. ನಮ್ಮ ಕುಟುಂಬಸ್ಥರಿಂದ 20 ಲಕ್ಷ ರೂಗಿಂತಲೂ ಹೆಚ್ಚು, ಸ್ನೇಹಿತರಿಂದ 50 ಲಕ್ಷ ರೂ.ಗಿಂತಲೂ ಅಧಿಕ ಮತ್ತು ಮೂರು ಬ್ಯಾಂಕ್ ಗಳಿಂದ 30 ರಿಂದ 40 ಲಕ್ಷಕ್ಕಿಂತಲೂ ಅಧಿಕ ರೂ. ಸಾಲ ಪಡೆದಿದ್ದಾನೆ. ಹೀಗಾಗಿ, ಆರೋಪಿ ಶಿವಲಿಂಗೇಶ್ ಗೆ ಯಾರೂ ಕೂಡ ಹಣ ನೀಡಬೇಡಿ ಎಂದು ಆತನ ಕುಟುಂಬಸ್ಥರು ಪೋಸ್ಟ್ ಹಾಕಿದ್ದಾರೆ.
ಮೋಸ ಹೋದ ಸಂತ್ರಸ್ತ ಯುವತಿ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ದೂರು ನೀಡಿದರೂ ಆರೋಪಿಯನ್ನು ಬಂಧಿಸಿಲ್ಲ ಅಂತ ಯುವತಿ ಎಕ್ಸ್ ನಲ್ಲಿ ಟ್ವೀಟ್ ಮಾಡಿ ಸಹಾಯ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.


