ಶಿವಮೊಗ್ಗ: ವಿದ್ಯುತ್ ಇಲಾಖೆಯಿಂದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು, ತಂತಿ ಬೇಲಿಗೆ ಬೋರ್ ವೆಲ್ ಮೋಟಾರ್ ನ ವಿದ್ಯುತ್ ಬೋರ್ಡ್ ನಿಂದ ವಿದ್ಯುತ್ ಸಂಪರ್ಕ ನೀಡಿ, ಇದರಿಂದ ತಂತಿ ಬೇಲಿಯನ್ನು ದಾಟುವಾಗ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆಗೆ ಸಂಬಂಧಿಸಿ ಬೋರ್‌ವೆಲ್ ಮಾಲೀಕರಿಬ್ಬರಿಗೆ 1 ವರ್ಷ ಕಾರಾವಾಸ ಮತ್ತು 11,000 ರೂ ದಂಡವನ್ನು ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಗಿರೀಶ್ ಅವರ ತಂದೆ ಕೋಣೆಹೊಸೂರಿನ ಗಾಮಪ್ಪ 2021ರ ಸೆ.25 ರಾತ್ರಿ 8-45 ರ ಸಮಯದಲ್ಲಿ ತಮ್ಮ ಮನೆಯ ಹಿಂಭಾಗದಲ್ಲಿರುವ ಆರೋಪಿತ ಲಕ್ಷ್ಮಣಪ್ಪ ಮತ್ತು ಲಿಂಗಪ್ಪರವರ ಜಮೀನಿಗೆ ಬಹಿರ್ದೆಸೆಗೆ ಹೋಗಿದ್ದು, ಆರೋಪಿತರು ಜಮೀನಿನಲ್ಲಿ ಬೋರ್ ವೆಲ್ ಹಾಕಿಸಿ ಅದರಿಂದ ಅನಧಿಕೃತವಾಗಿ ತಂತಿಬೇಲಿಗೆ ಕರೆಂಟ್ ಹರಿಸಿದ್ದರು.
ಇದರಿಂದ ಗಾಮಪ್ಪ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿ, ಸಿಪಿಐ ಅಭಯ್ ಪ್ರಕಾಶ್ ಸೋಮನಾಳ ತನಿಖೆ ಪೂರೈಸಿ, ನ್ಯಾಯಾಲಂಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಾಂತರಾಜ್ ವಾದ ಮಂಡಿಸಿದ್ದರು.
3 ನೇ ಹೆಚ್ಚುವರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶ ಯಶವಂತಕುಮಾರ್ ಆರೋಪಿ ಲಕ್ಷ್ಮಣಪ್ಪ ಬಿನ್ ಹುಚ್ಚಪ್ಪ (48) ಮತ್ತು ಲಿಂಗಪ್ಪ ಬಿನ್ ಹುಚ್ಚಪ್ಪ, (43) ಇವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.


