ಬೆಂಗಳೂರು: ದುಡಿದು ಸಂಪಾದನೆ ಮಾಡದೇ ಕಾಲಕಳೆಯುತ್ತಿದ್ದ ಮಗ ಅಪ್ಪ ಮಾಡಿಟ್ಟಿದ್ದ ಆಸ್ತಿ ಹೊಡೆಯಲು ಸ್ನೇಹಿತನ ಜೊತೆಗೂಡ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಬಾಗಲಗುಂಟೆಯಲ್ಲಿ ಆರೋಪಿ ಮನೋಜ್ ತಲೆಮರೆಸಿಕೊಂಡಿದ್ದು, ಕೊಲೆಗೆ ಸಹಕರಿಸಿದ ಸ್ನೇಹಿತ ಪ್ರವೀಣ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಾಸರಹಳ್ಳಿಯ ಕೆಂಪೇಗೌಡ ನಗರದ ಉದ್ಯಮಿ ಮಂಜುನಾಥ್ ಅವರನ್ನು 10ನೇ ತರಗತಿಗೆ ಶಾಲೆ ಬಿಟ್ಟು ಕೆಲಸವಿಲ್ಲದೆ ಅಲೆದಾಡುತ್ತಿದ್ದ ಮಗ ಮನೋಜ್ ಕೊಲೆ ಮಾಡಿ ಆತ್ಮಹತ್ಯೆ ಕಥೆ ಕಟ್ಟಿ ಪಾರಾಗಲು ಯತ್ನಿಸಿದ್ದ.
ಸೆ.2 ರಂದು ದಾಸರಹಳ್ಳಿಯ ಕೆಂಪೇಗೌಡ ನಗರದಲ್ಲಿ ಉದ್ಯಮಿ ಮಂಜುನಾಥ್ ಅವರನ್ನು ಮನೆಯಲ್ಲಿಯೇ ಕೊಲೆ ಮಾಡಲಾಗಿದೆ. ಅವರ ಪತ್ನಿ ಹಾಗೂ ಕಿರಿಯ ಮಗ ವೈದ್ಯಕೀಯ ತಪಾಸಣೆಗಾಗಿ ಹೊರಗೆ ಹೋಗಿದ್ದಾಗ ಕೊಲೆ ಮಾಡಲಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಇದೊಂದು ಕೊಲೆ ಅನ್ನೋದು ಬಯಲಾಗಿದೆ.
ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮನೋಜ್ ಮನೆಯವರಿಗೆ ಹೇಳಿದ್ದ. ತದನಂತರ ಮಂಜುನಾಥ್ ಅವರ ತಾಯಿ ಹಾಗೂ ಕಿರಿಯ ಮಗ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.
ಮಂಜುನಾಥ್ ಐದಾರು ಬಿಲ್ಡಿಂಗ್, ನಾಲ್ಕೈದು ಸೈಟ್, ಒಂದು ವುಡ್ ವರ್ಕ್ಸ್ ಫ್ಯಾಕ್ಟರಿ ಅನ್ನು ಹೊಂದಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ದೊಡ್ಡ ಮಗ ಮನೋಜ್ ಕೆಲಸ ಕಾರ್ಯ ಮಾಡದೆ ಸುತ್ತಾಡಿಕೊಂಡಿರುತ್ತಿದ್ದ. ಹೀಗಾಗಿ ತಂದೆ, ಮಗನಿಗೆ ಆಗಾಗ ಬುದ್ಧಿ ಹೇಳ್ತಿದ್ದರು.
ಇದರಿಂದ ಮಗ ಮನೋಜ್, 5 ವರ್ಷದ ಹಿಂದೆಯೇ ಅಪ್ಪನನ್ನ ಕೊಂದು ಆಸ್ತಿ ಹೊಡೆಯೋ ಪ್ಲಾನ್ ಮಾಡಿದ್ದ. ಹೀಗಾಗಿ ಸ್ನೇಹಿತ ಪ್ರವೀಣ್‌ಗೆ 15 ಲಕ್ಷ ರೂ. ಸುಪಾರಿ ನೀಡಿ, 15,000 ರೂ. ಹಣವನ್ನು ಅಡ್ವಾನ್ಸ್ ಆಗಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


