Tuesday, February 17, 2026
Google search engine
Homeಅಪರಾಧಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿಯನ್ನೇ ಕೊಂದ ತಂದೆಯ ಮುದ್ದಿನ ಮಗಳು!

ಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿಯನ್ನೇ ಕೊಂದ ತಂದೆಯ ಮುದ್ದಿನ ಮಗಳು!

ತಂದೆಯ ಸಾವಿಗೆ ತಾಯಿಯೇ ಕಾರಣ ಎಂದು ಜ್ಯೋತಿಷಿ ಮಾತು ನಂಬಿದ ಮಗಳು ಹೆತ್ತ ತಾಯಿಯನ್ನೇ ಕೊಲೆ ಮಾಡಿ ಹೃದಯಾಘಾತದ ಕಥೆ ಕಟ್ಟಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ನಗರದ ಬಂಡೇಪಾಳ್ಯ ಬಳಿಯ ಶ್ರೀನಗರ ನಿವಾಸಿ ಪುಷ್ಪಲತಾ ಅವರನ್ನು ಮಗಳು ಸುಚಿತ್ರಾ ಕೊಲೆ ಮಾಡಿದ್ದಾರೆ. ಕೊಲೆ ವಿಷಯ ಗೊತ್ತಿದ್ದರೂ ಮೌನವಾಗಿದ್ದ ಪತಿ ಸುರೇಶ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

ಪುಷ್ಪಲತಾ ಕಟ್ಟಿಸಿದ ಸ್ವಂತ ಮನೆಯಲ್ಲಿ ಮಗಳು ಸುಚಿತ್ರಾ ಹಾಗೂ ಆಳಿಯ ಸುರೇಶ್‌ ಜೊತೆ ವಾಸವಿದ್ದರು. ಮಂಡಿ ನೋವು ಎಂದು ಹಾಸಿಗೆ ಹಿಡಿದಿದ್ದ ಪುಷ್ಪಲತಾ ಫೆಬ್ರವರಿ 11 ರಂದು ರಾತ್ರಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು.

ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ ಮಗಳು ಅಂತ್ಯಕ್ರಿಯೆಗೆ ಮುಂದಾಗಿದ್ದಳು. ಸ್ಥಳೀಯರು ಈ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ಸಾವಿನ ಹಿಂದಿನ ಅಸಲಿ ಸತ್ಯ ಬಯಲು ಮಾಡಿದ್ದಾರೆ. ಪುಷ್ಪಲತಾ ಹೃದಯಾಘಾತದಿಂದ ಸಾವನ್ನಪ್ಪಿಲ್ಲ, ಕೊಲೆಯಾಗಿದ್ದಾರೆ ಎಂಬುದನ್ನು ಬಯಲುಮಾಡಿ ಸುಚಿತ್ರಾ ಹಾಗೂ ಪತಿಯನ್ನು ಬಂಧಿಸಿದ್ದಾರೆ.

ತಂದೆಯ ಮುದ್ದಿನ ಮಗಳಾಗಿದ್ದ ಸುಚಿತ್ರಾ ವರ್ಷದ ಹಿಂದೆ ಇದ್ದಕಿದ್ದಂತೆ ಅನಾರೋಗ್ಯದ ಕಾರಣ ತಂದೆ ಬಾಬು ನಾಯಕ್‌ ಸಾವಿನಿಂದ ಮಂಕಾಗಿದ್ದಳು. ತಂದೆಯ ಸಾವಿನ ಬಗ್ಗೆ ಜ್ಯೋತಿಷಿ ಬಳಿ ಹೋಗಿದ್ದಳು. ತಂದೆಯ ಸಾವಿಗೆ ತಾಯಿ ಪುಷ್ಪಲತಾ ಮಾಟ ಮಂತ್ರ ಮಾಡಿಸಿರುವುದೇ ಕಾರಣ. ನಿನಗೂ ಕಂಟಕ ಇದೆ ಎಂದು ಜ್ಯೋತಿಷಿ ಹೇಳಿದ್ದರು.

ಜ್ಯೋತಿಷಿ ಮಾತನ್ನು ನಂಬಿದ ಸುಚಿತ್ರಾ, ಫೆಬ್ರವರಿ 11ರ ರಾತ್ರಿ ಊಟ ಮಾಡಿ ಮಲಗಿದ್ದ ತಾಯಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಈ ವೇಳೆ ಹಲ್ಲೆ ಸಹ ಮಾಡಿದ್ದಳು ಎನ್ನಲಾಗಿದ್ದು, ಮುಖದಲ್ಲಿ ರಕ್ತಕಲೆಗಳು ಕಾಣಿಸಿವೆ. ಈ ಎಲ್ಲಾ ವಿಚಾರ ಗೊತ್ತಿದ್ದ ಸುಚಿತ್ರಾ ಗಂಡ ಮೌನ ವಹಿಸಿದ್ದ. ಪೊಲೀಸರ ತನಿಖೆ ವೇಳೆ ಆತ ಸಹ ಪರೋಕ್ಷವಾಗಿ ಶಾಮೀಲಾಗಿರುವ ಅಂಶಗಳು ಕಂಡು ಬಂದಿವೆ. ಸುಚಿತ್ರಾ ಹಾಗೂ ಆಕೆಯ ಪತಿ ಸುರೇಶ್ ಅನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ.

ಕ್ಯಾತಸಂದ್ರ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿರುವ ಸುಚಿತ್ರಾ ಜ್ಯೋತಿಷಿ ಕಥೆ ಹೇಳಿದ್ದಾಳೆ. ಅಲ್ಲದೇ ಹಣದ ಸಮಸ್ಯೆ ಕೂಡ ಪತ್ತೆ ಹಚ್ಚಿದ್ದಾರೆ. ಇತ್ತೀಚಿಗೆ ಜಾಗ ಮಾರಿ ಬಂದ ಲಕ್ಷಾಂತರ ರೂ. ಹಣವನ್ನು ಪುಷ್ಪಲತಾ ತಾನೇ ಇಟ್ಟುಕೊಂಡಿದ್ದಳು ಎನ್ನಲಾಗಿದೆ. ಅದೇ ವಿಚಾರವಾಗಿ ಜಗಳ ನಡೆದು ಕೊಲೆ ಮಾಡಿರುವ‌ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ತಾನೇ ಕೊಂದು ಕಥೆ ಕಟ್ಟಿದ್ದ ಸುಚಿತ್ರಾ, ತಾವು ವಾಸವಿದ್ದ ಶ್ರೀನಗರದ ಮನೆಯಿಂದ ತುಮಕೂರು ತಾಲ್ಲೂಕಿನ ಅನುಪನಹಳ್ಳಿಯ ಸಂಬಂಧಿಕರ ಮನೆಗೆ ಬೆಳ್ಳಂಬೆಳಿಗ್ಗೆಯೇ ಶವ ತಂದಿದ್ದು, ಯಾರಿಗೂ ಗೊತ್ತಾಗದ ರೀತಿ ಎಲ್ಲರ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಳು ಎಂಬುದೂ ವಿಚಾರಣೆ ವೇಳೆ ಗೊತ್ತಾಗಿದೆ. ಈ ವಿಚಾರ ತಿಳಿದ ಸಂಬಂಧಿಕರು ಆಘಾತಕ್ಕೊಳಗಾಗಿದ್ದಾರೆ.

ಇತ್ತೀಚೆಗೆ ಶ್ರೀನಗರದ ಬಳಿ ತಾಯಿ ಹಾಗೂ ಮಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಪುಷ್ಪಲತಾ ಸಾವಿನ ವಿಚಾರ ತಿಳಿದವರು ಮೊದಲು ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಶವ ಹೂಳುವ ಸಂದರ್ಭದಲ್ಲಿ ಗಲಾಟೆ ಮಾಡಿದ್ದರು ಎನ್ನಲಾಗಿದೆ. ಆ ಬಳಿಕ ಬಂದ ಪೊಲೀಸರು ನಡೆಸಿದ ವಿಚಾರಣೆ ವೇಳೆ ಕೊಲೆ ಸಂಗತಿ ಬಯಲಾಗಿದೆ. ಆದರೆ, ಜ್ಯೋತಿಷಿ ಹೇಳಿದ ಕಾರಣಕ್ಕೆ ಕೊಲೆಯಾಯ್ತಾ‌ ಅಥವಾ ಹಣಕ್ಕಾಗಿ ಹತ್ಯೆಯಾಯಿತಾ ಎಂಬ ವಿಚಾರ ತನಿಖೆಯಿಂದ ಬಯಲಾಗಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments