Thursday, December 25, 2025
Google search engine
Homeಅಪರಾಧ7 ವರ್ಷಗಳ ನಂತರ ಸಿಕ್ಕಿಬಿದ್ದ ಕೋಡಿಮಠ ಶ್ರೀಗಳ ಚಿನ್ನಾಭರಣ ಕದ್ದಿದ್ದ ಖದೀಮ!

7 ವರ್ಷಗಳ ನಂತರ ಸಿಕ್ಕಿಬಿದ್ದ ಕೋಡಿಮಠ ಶ್ರೀಗಳ ಚಿನ್ನಾಭರಣ ಕದ್ದಿದ್ದ ಖದೀಮ!

ಬೆಂಗಳೂರು:ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರಸ್ವಾಮಿಗಳ ಬಳಿ 7 ವರ್ಷಗಳ ಹಿಂದೆ ರೈಲಿನಲ್ಲಿ ಪ್ರಯಾಣಿಸುವಾಗ ನಡೆದ ಕಳ್ಳತನ ಪ್ರಕರಣದ ಅಂತರಾಜ್ಯ ಕಳ್ಳನನ್ನು ರೈಲ್ವೆ ಪೊಲೀಸರು ಬಂಧಿಸಿ 22.75 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರಖಾಂಡ್ ರಾಜ್ಯದ ನೈನಿತಾಲ್ ಜಿತೇಂದ್ರಕುಮಾರ್ ಚಾವ್ಹಾ(37)ಬಂಧಿತ ಆರೋಪಿಯಾಗಿದ್ದು,ಆತನಿಂದ ನಾಲ್ಕು ಪ್ರಕರಣಗಳ ಸಂಬಂಧ 22.75 ಲಕ್ಷ ಮೌಲ್ಯದ 281ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಎಸ್ ಪಿ ಡಾ.ಎಸ್ .ಕೆ. ಸೌಮ್ಯಲತಾ ಅವರು ಶನಿವಾರ ಸುದ್ಧಿಗಾರರಿಗೆ ತಿಳಿಸಿದ್ದಾರೆ.

ಕಳೆದ 2018ರಲ್ಲಿ ಸ್ವಾಮೀಜಿ ಬಾಗಲಕೋಟೆಯಿಂದ ಅರಸೀಕೆರೆಗೆ ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಲೆದರ್ ಬ್ಯಾಗ್‌ನಲ್ಲಿ 250 ಗ್ರಾಂ ಚಿನ್ನದ ಸರ, ಗೌರಿಶಂಕರ ರುದ್ರಾಕ್ಷಿ ಪದಕ, 50 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು ಹಾಗೂ 1.62 ಲಕ್ಷ ನಗದನ್ನು ಇಟ್ಟಿದ್ದ ಬ್ಯಾಗ್ ತಲೆಯ ಕೆಳಗಿಟ್ಟು ನಿದ್ದೆಗೆ ಜಾರಿದ್ದ ಸ್ವಾಮೀಜಿ, ತಡರಾತ್ರಿ 2:15ಕ್ಕೆ ಎದ್ದು ನೋಡಿದಾಗ ಬ್ಯಾಗ್ ಸ್ಥಾನ ಬದಲಾಗಿ, ಅದರಲ್ಲಿದ್ದ ಚಿನ್ನಾಭರಣ ಮತ್ತು ಹಣ ಕಾಣೆಯಾಗಿತ್ತು. ಈ ಸಂಬಂಧ ಅರಸೀಕೆರೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಇದಲ್ಲದೆ ಕಳೆದ ಫೆ.10 ರಂದು ಪ್ರೀತಮ್ ಕುಲಕರ್ಣಿ ಅವರ ತಂದೆ ಪಂಡಿತ್ ಶಂಕರ್ ರಾವ್ ಕುಲಕರ್ಣಿ ಹಾಗೂ ತಾಯಿ ಇಬ್ಬರು ಫೆ.8 ರಂದು‌ ಉಡುಪಿಯಿಂದ ಬೆಂಗಳೂರಿಗೆ ಪಂಚಗಂಗಾ ಎಕ್ಸ್ ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಬರುವಾಗ, ಸೀಟಿನ ಮೇಲಿದ್ದ ಅವರ ಎರಡು ಬ್ಯಾಗ್ ಗಳು ಕಳ್ಳತನವಾಗಿದ್ದವು.

ಅವುಗಳಲ್ಲಿನ ವ್ಯಾನಿಟಿ ಬ್ಯಾಗ್‌ನಲ್ಲಿ 25 ಸಾವಿರ ನಗದು, 6ಗ್ರಾಂ ಚಿನ್ನದ ಕಿವಿ ಓಲೆ ಮನೆ ಕೀ,ಎರಡು ಡೆಬಿಟ್ ಕಾರ್ಡ್ ಗಳು, ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳಿದ್ದು ಸುಮಾರು 65 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿತ್ತು.

ಇವೆರಡೂ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಡಿವೈಎಸ್ ಪಿ ಸತೀಶ್ ಕುಮಾರ್, ಇನ್ಸ್ ಪೆಕ್ಟರ್ ಚೇತನ್ ನೇತೃತ್ವದ ವಿಶೇಷ ತಂಡವು ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ವಾಹನ ಡೀಲರ್ ಆಗಿದ್ದ ಆರೋಪಿಯು ರೈಲಿನ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರಂತೆ ಟಿಕೆಟ್ ಖರೀದಿಸಿ, ಚಿನ್ನಾಭರಣ ಮತ್ತು ಹಣ ಇರುವವರನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.

ಸ್ವಾಮೀಜಿ ಬ್ಯಾಗ್ ಕಳವು ನಡೆದು 7 ವರ್ಷಗಳ ನಿರಂತರ ತನಿಖೆಯ ನಂತರ ಜಿತೇಂದ್ರ ಕುಮಾರ್‌ನನ್ನು ಬಂಧಿಸಿ ಆತನಿಂದ 22.75 ಲಕ್ಷ ರೂಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಬಂಧನದಿಂದ ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಡೆದ 13 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments