ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದ ಮೇಲೆ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡ ನಟ ದರ್ಶನ್ ಗೆ ಜೈಲಿಗೆ ಹೋಗುವಾಗಲೇ ರಾಜಾತಿಥ್ಯದೊಂದಿಗೆ ಕರೆದೊಯ್ಯಲಾಗಿದೆ.
ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಗುರುವಾರ ದರ್ಶನ್ ಅವರನ್ನು ಸ್ಥಳಾಂತರ ಮಾಡಲಾಗಿದ್ದು, ಬಳ್ಳಾರಿ ಜೈಲಿಗೆ ವಿಚಾರಣಾಧೀನ ಕೈದಿಯಾಗಿ ದರ್ಶನ್ ಬಂದರೋ ಅಥವಾ ಸಿನಿಮಾ ಶೂಟಿಂಗ್ ಗೆ ಬಂದರೋ ಎಂಬ ಅನುಮಾನ ಕಾಡತೊಡಗಿದೆ.
ದರ್ಶನ್ ಬಳ್ಳಾರಿ ಜೈಲಿಗೆ ಪ್ರವೇಶಿಸುವಾಗ ಬ್ರ್ಯಾಂಡೆಡ್ ಟೀ ಶರ್ಟ್, ಕೂಲಿಂಗ್ ಗ್ಲಾಸ್, ವ್ರಿಸ್ಟ್ ಬ್ಯಾಂಡ್, ಪುಲ್ ಓವರ್ ಧರಿಸಿದ್ದರು. ಇದು ಕೈದಿಯೊಬ್ಬರನ್ನು ಕರೆತರುವ ಬದಲು ವಿಐಪಿಯನ್ನು ಕರೆ ತರುವಂತೆ ಕರೆ ತರಲಾಗಿದೆ. ದರ್ಶನ್ ಧರಿಸಿದ್ದ ಬಟ್ಟೆ ಹಾಗೂ ವಸ್ತುಗಳ ಮೌಲ್ಯವೇ ಅರ್ಧಲಕ್ಷಕ್ಕೆ ಹೆಚ್ಚಿನದಾಗಿದೆ ಎಂದು ಅಂದಾಜಿಸಲಾಗಿದೆ.
ಪೊಲೀಸ್ ವ್ಯಾನಿನಿಂದ ಇಳಿದು ಬಳ್ಳಾರಿ ಜೈಲಿಗೆ ದರ್ಶನ್ ಪ್ರವೇಶಿಸುವಾಗ ಬ್ರಾಂಡೆಡ್ ಟೀಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದರು. ಅವರು ಧರಿಸಿದ್ದ ಪ್ಯೂಮಾ ಟೀಶರ್ಟ್ ಬೆಲೆ 10 ಸಾವಿರ ರೂ., ಅವರು ಧರಿಸಿದ್ದ ಕೂಲಿಂಗ್ ಗ್ಲಾಸ್ ನ ಬೆಲೆ ಏನಿಲ್ಲವೆಂದರೂ 1 ಲಕ್ಷ ರೂ. ಮೌಲ್ಯದ್ದಾಗಿದೆ. 25 ಸಾವಿರ ಮೌಲ್ಯದ ಪುಲ್ ಓವರ್ ಧರಿಸಿದ್ದರು. ಅವರು ಧರಿಸಿದ್ದ ಬ್ರಾಂಡೆಡ್ ಜೀನ್ಸ್ ಏನಿಲ್ಲವೆಂದರೂ 30 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ದರ್ಶನ್ ತಮ್ಮ ಎಡಗೈಗೆ ತೊಟ್ಟಿದ್ದ ವ್ರಾಪ್ ಬ್ಯಾಂಡ್ ನ ಬೆಲೆ ಕನಿಷ್ಟವೆಂದರೂ 5 ಸಾವಿರ ರೂ.ಗಳದ್ದಗಿದೆ. ಅಂದರೆ ದರ್ಶನ್ ಜೈಲು ಪ್ರವೇಶಿಸುವಾಗ 1 ಲಕ್ಷದ 70 ಸಾವಿರ ರೂ.ಗಳಷ್ಟು ಮೌಲ್ಯದ ಬಟ್ಟೆ ಬರೆ ಹಾಗೂ ಗ್ಯಾಜೆಟ್ ಧರಿಸಿದ್ದರೆಂದು ಹೇಳಲಾಗಿದೆ.
ಬೆಂಗಾವಲು ಪೊಲೀಸ್ ಸಿಬ್ಬಂದಿಗೆ ನೋಟಿಸ್?
ದರ್ಶನ್ ಗೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ವೇಳೆ ನಿಯಮ ಪಾಲಿಸದ ಬೆಂಗಾವಲು ವಾಹನ ಸಿಬ್ಬಂದಿಗೆ ಬೆಂಗಳೂರು ಉತ್ತರ ವಲಯ ಡಿಜಿಪಿ ನೋಟಿಸ್ ನೀಡಲು ಮುಂದಾಗಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್ ಅವರನ್ನು ಕರೆತರಲಾಗಿದ್ದು, ಈ ವೇಳೆ ನಟ ದರ್ಶನ್ ಕೈಗೆ ಕಡಗ, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸ್ಟೈಲಾಗಿ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ಬೆಂಗಾವಲು ವಾಹನ ಸಿಬ್ಬಂದಿಗೆ ಬೆಂಗಳೂರು ಉತ್ತರ ವಲಯ ಡಿಜಿಪಿ ನೋಟಿಸ್ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.