ನಟ ದರ್ಶನ್ ಅವರ ಕಾನೂನಾತ್ಮಕ ಹಾಗೂ ಏಕೈಕ ಪತ್ನಿ ನಾನಾಗಿದ್ದು, ಪವಿತ್ರಾ ಗೌಡ ಪತ್ನಿ ಅಲ್ಲ. ಆಕೆ ಕೇವಲ ಸ್ನೇಹಿತೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ಪತ್ರ ಬರೆದಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ದಾಖಲೆಗಳಲ್ಲಿ ಪವಿತ್ರಾ ಗೌಡ ಅವರನ್ನು ಪತ್ನಿ ಎಂದು ಉಲ್ಲೇಖಿಸಬಾರದು. ಇದರಿಂದ ಮುಂದಿನ ದಿನಗಳಲ್ಲಿ ನನಗೆ ಕಾನೂನಾತ್ಮಕ ಸಮಸ್ಯೆಗಳು ಆಗಬಹುದು ಎಂದು ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಪತ್ರವನ್ನು ವಿಜಯಲಕ್ಷ್ಮೀ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸುದ್ದಿಗೋಷ್ಠಿಯಲ್ಲಿ ದಯಾನಂದ್ ಅವರು ದರ್ಶನ್ ಅವರ ಪತ್ನಿ ಪವಿತ್ರಾ ಗೌಡ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಈ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಮಾಧ್ಯಮಗಳು ದರ್ಶನ್ ಅವರ ಪತ್ನಿ ಪವಿತ್ರಾ ಗೌಡ ಎಂದು ವರದಿ ಪ್ರಕಟಿಸುತ್ತಿವೆ.
ಪೊಲೀಸರ ಹೇಳಿಕೆ ಹಾಗೂ ಮಾಧ್ಯಮಗಳ ವರದಿಯಿಂದ ನನಗೆ ನೋವಾಗಿದೆ. ನಾನು ಮತ್ತು ದರ್ಶನ್ 2003ರಲ್ಲಿ ಧರ್ಮಸ್ಥಳದಲ್ಲಿ ಮದುವೆ ಆಗಿದ್ದು, ನಮಗೆ ಒಬ್ಬ ಮಗನಿದ್ದಾನೆ. ಪವಿತ್ರಾ ಗೌಡ ಕೂಡ ಸಂಜಯ್ ಎಂಬವರೊಂದಿಗೆ ಮದುವೆ ಆಗಿದ್ದು ಇಬ್ಬರಿಗೂ ಮಗಳು ಇದ್ದಾಳೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಪ್ರಕರಣದ ದಾಖಲೆಗಳಲ್ಲಿ ಪವಿತ್ರಾ ಗೌಡ ಅವರನ್ನು ಪತ್ನಿ ಎಂದು ಉಲ್ಲೇಖಿಸಬಾರದು. ಏಕೆಂದರೆ ಅವರು ಪತ್ನಿ ಅಲ್ಲ. ಸ್ನೇಹಿತೆ ಮಾತ್ರ ಎಂದು ವಿಜಯಲಕ್ಷ್ಮೀ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.