ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೀವನದಿ ಕಾವೇರಿ ನದಿ ತುಂಬಿ ಹರಿಯತ್ತಿದ್ದು, ತೀವ್ರ ನಿರೀಕ್ಷೆ ಹೊಂದಲಾಗಿದ್ದ ಕೆಆರ್ ಎಸ್ ಜಲಾಶಯ ಭರ್ತಿಯಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್ ಎಸ್ ಡ್ಯಾಂ ಭಾನುವಾರ ಸಂಜೆ ವೇಳೆಗೆ ಭರ್ತಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ 25 ಕ್ರೆಸ್ಟ್ ಗೇಟ್ ಗಳ ಮೂಲಕ 50 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಕೆಆರ್ ಎಸ್ ಡ್ಯಾಂ ಜಲಾಶಯದ ಗರಿಷ್ಠ ಮಟ್ಟ 124.70 ಅಡಿಯಾಗಿದ್ದು, 122.70 ಅಡಿಗಳಷ್ಟು ನೀರು ಭರ್ತಿಯಾಗಿದೆ. ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಸೋಮವಾರ ಬೆಳಿಗ್ಗೆಯಿಂದ 50 ಸಾವಿರ ಕ್ಯೂಸೆಕ್ಸ್ ನಷ್ಟು ನೀರನ್ನು ಹೊರಗೆ ಬಿಡಲಾಗುತ್ತಿದೆ.
ಕೆಆರ್ ಎಸ್ ನಲ್ಲಿ ಗರಿಷ್ಠ 49 ಟಿಎಂಸಿ ನೀರು ಸಂಗ್ರಹ ಮಾಡಬಹುದಾಗಿದ್ದು, 46 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 2 ಅಡಿ ಭರ್ತಿಯಾಗಲು ಅಧಿಕಾರಿಗಳು ಬಿಡುವುದಿಲ್ಲ.
ಕಳೆದ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಕೆಆರ್ ಎಸ್ ಅರ್ಧದಷ್ಟು ಭರ್ತಿಯಾಗದೇ ಜನರು ಪರದಾಡುವಂತಾಯಿತು. ಆದರೆ ಇದೀಗ ಮುಂಗಾರು ಮಳೆ ತಡವಾಗಿಯಾದರೂ ಅಬ್ಬರಿಸುತ್ತಿರುವುದರಿಂದ ಕೆಆರ್ ಎಸ್ ಭರ್ತಿಯಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಕೆಆರ್ ಎಸ್ ಗೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಕಣ್ತುಂಬಿಕೊಂಡರು. ಡಿಕೆ ಶಿವಕುಮಾರ್ ಅಲ್ಲದೇ ಕೃಷಿ ಸಚಿವ ಚಲುವರಾಯಸ್ವಾಮಿ ಸಾಥ್ ನೀಡಿದರು.
ಕೆಆರ್ ಎಸ್ ಭರ್ತಿಯಾಗುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ವಿಷಯ ತಲುಪಿದರು. ಈಗಾಗಲೇ ಕೆಆರ್ ಎಸ್ ಜಲಾಶಯ ಭರ್ತಿ ಹಿನ್ನೆಲೆಯಲ್ಲಿ ರೈತರ ನಾಲೆಗಳಿಗೆ ನೀರು ಬಿಡಲಾಗುತ್ತಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹಾಗೂ ಕೆಆರ್ ಎಸ್, ಕಬಿನಿ, ಹೇಮಾವತಿ ಡ್ಯಾಂಗಳು ಭರ್ಥಿಯಾಗಿರುವುದರಿಂದ ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ನಿಗಮ ಸೂಚನೆಯಂತೆ 1 ಟಿಎಂಸಿ ನೀರು ಬಿಡಲಾಗುವುದು. ಈ ವರ್ಷ ಎರಡೂ ರಾಜ್ಯಗಳ ನಡುವೆ ಯಾವುದೇ ನೀರಿನ ಬಿಕ್ಕಟ್ಟು ಉದ್ಭವಿಸುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.