ಕೆಎಲ್ ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 19 ರನ್ ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಟಿ-20 ಟೂರ್ನಿಯ ಪ್ಲೇಆಫ್ ಕನಸನ್ನು ನುಚ್ಚುನೂರುಗೊಳಿಸಿತು. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಸುಲಭಗೊಳಿಸಿದೆ.
ಡೆಲ್ಲಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 189 ರನ್ ಗಳಿಸಲಷ್ಟೇ ಶಕ್ತವಾಯಿತು.
ಈಗಾಗಲೇ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಈ ಪಂದ್ಯದಲ್ಲಿ ಲಕ್ನೋ ತಂಡವನ್ನು ಸೋಲಿಸಿ ಪ್ಲೇಆಫ್ ರೇಸ್ ನಿಂದ ಹೊರ ಹಾಕಿತು. ಇದರೊಂದಿಗೆ ಆರ್ ಸಿಬಿಗೆ ಪ್ಲೇಆಫ್ ರೇಸ್ ನಲ್ಲಿ ಹೋರಾಡಬೇಕಿದ್ದ ಮತ್ತೊಂದು ತಂಡ ಬದಿಗೆ ಸರಿದಂತಾಗಿದೆ. ಲಕ್ನೋ 13 ಪಂದ್ಯಗಳಲ್ಲಿ 6 ಗೆಲುವು ಹಾಗೂ 7 ಸೋಲಿನೊಂದಿಗೆ 12 ಅಂಕ ಗಳಿಸಿದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ರನ್ ಸರಾಸರಿಯಲ್ಲಿ ಹಿಂದೆ ಬಿದ್ದು 7ನೇ ಸ್ಥಾನಿಯಾಗಿ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿತು.
ಡೆಲ್ಲಿ ತವರಿನಲ್ಲಿ ಆಡಿದ ಪ್ರಸಕ್ತ ಸಾಲಿನ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದರೂ 14 ಪಂದ್ಯಗಳಲ್ಲಿ 7 ಜಯ ಹಾಗೂ 7 ಸೋಲಿನೊಂದಿಗೆ 14 ಅಂಕ ಪಡೆದು 5ನೇ ಸ್ಥಾನ ಪಡೆದರೂ ರನ್ ಸರಾಸರಿಯಲ್ಲಿ ಹಿಂದೆ ಬಿದ್ದಿದ್ದರಿಂದ ಟೂರ್ನಿಯಿಂದ ಹೊರಬಿದ್ದಿತು.
ಒಟ್ಟಾರೆ 5 ತಂಡಗಳು ಪ್ಲೇಆಫ್ ರೇಸ್ ನಿಂದ ಹೊರಬಿದ್ದಿದ್ದು, 2 ತಂಡಗಳು ಈಗಾಗಲೇ ಪ್ಲೇಆಫ್ ಗೆ ಬಹುತೇಕ ಸ್ಥಾನ ಖಚಿತಪಡಿಸಿಕೊಂಡಿದ್ದು ಮೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಒಂದು ವೇಳೆ ಲಕ್ನೋ ಗೆದ್ದಿದ್ದರೆ 6 ತಂಡಗಳ ನಡುವೆ ಪ್ಲೇಆಫ್ ಗಾಗಿ ಪೈಪೋಟಿ ಏರ್ಪಡುತ್ತಿತ್ತು. ಇದೀಗ ಆರ್ ಸಿಬಿ 12 ಅಂಕದೊಂದಿಗೆ 6ನೇ ಸ್ಥಾನದಲ್ಲಿದ್ದರೂ ಮೇ 18ರಂದು ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದರೆ ಪ್ಲೇಆಫ್ ಪ್ರವೇಶಿಸಬಹುದಾಗಿದೆ.
ಮತ್ತೊಂದೆಡೆ 14 ಅಂಕ ಪಡೆದಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಗೂ ಅವಕಾಶ ಇದೆ. ಆದ್ದರಿಂದ ಆರ್ ಸಿಬಿ ಮೇ 18ರ ವಿರುದ್ಧ ಭಾರೀ ಅಂತರದಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸಬಹುದಾಗಿದೆ. ಅಲ್ಲದೇ ಹೈದರಾಬಾದ್ ತಂಡ ಗೆದ್ದರೂ ಆರ್ ಸಿಬಿಗೆ ಯಾವುದೇ ಸಮಸ್ಯೆ ಇಲ್ಲ. ಸೋತರೆ ರನ್ ಸರಾಸರಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹೈದರಾಬಾದ್ ನಡುವೆ ಅಗ್ರ 4ರಲ್ಲಿ ಸ್ಥಾನಕ್ಕಾಗಿ ಪೈಪೋಟಿ ಏರ್ಪಡಲಿದೆ.