ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ 150೦ ಕೋಟಿ ಖರ್ಚು ಮಾಡಿದರೂ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದೆ. ಕುಮಾರಸ್ವಾಮಿ ನನ್ನ ಜೊತೆಗೆ ಇದ್ದಾಗ 4 ಕೋಟಿ ಖರ್ಚು ಮಾಡಿ ಚನ್ನಪಟ್ಟಣದಲ್ಲಿ ಗೆದ್ದಿದ್ದರು. ಈಗ 150 ಕೋಟಿ ಖರ್ಚು ಮಾಡಿಯೂ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂದರು.
ಜೆಡಿಎಸ್ ಗೆ ಈ ಪರಿಸ್ಥಿತಿ ಬರಬಾರದಿತ್ತು. ಇನ್ನಾದರೂ ಕುಮಾರಸ್ವಾಮಿ ಬುದ್ದಿ ಕಲಿಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಕಷ್ಟವಾಗಲಿದೆ ಎಂದು ಅವರು ಹೇಳಿದರು.
ಜಿಟಿ ದೇವೇಗೌಡ ಅವರಂತೆ ಹಲವು ಶಾಸಕರು ಕುಮಾರಸ್ವಾಮಿ ಅವರ ನಿಲುವಿನಿಂದ ಬೇಸರಗೊಂಡಿದ್ದಾರೆ. 12-13 ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಅವರನ್ನು ಒಗ್ಗೂಡಿಸುವ ಕೆಲಸ ಆರಂಭಿಸಿದ್ದೇನೆ. ಮುಂದೆ ಏನಾಗುತ್ತೋ ನೋಡಬೇಕು ಎಂದು ಅವರು ಹೇಳಿದರು.
ಚನ್ನಪಟ್ಟಣ ಸೋಲಿನಿಂದ ಒಂದು ಜಾತಿ ಕೈ ಕೊಟ್ಟಿತು. ಅವರಿಗೆ ನಾವು ಬೇಡವಾಗಿದ್ದೇವೆ ಎಂದೆಲ್ಲಾ ಹೇಳಿದ್ದಾರೆ. ನೀವು ಮಾಡಿದ ತಪ್ಪಿಗೆ ಬೇರೆ ಜಾತಿಯವರನ್ನು ಯಾಕೆ ಬೈಯ್ಯುತ್ತೀರಿ ಎಂದು ಸಿಎಂ ಇಬ್ರಾಹಿಂ ಪ್ರಶ್ನಿಸಿದರು.