ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಎದುರಿಸುತ್ತಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಇದೇ ಮೊದಲ ಬಾರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ಕೂಡಲೇ ವಿದೇಶದಿಂದ ವಾಪಸ್ ಬಂದು ಪೊಲೀಸರಿಗೆ ಶರಣಾಗು, ಇಲ್ಲದಿದ್ದರೆ ನನ್ನ ಕೋಪ ನೋಡಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಮೇ 18ರಂದು ನಾನು ದೇವಸ್ಥಾನಕ್ಕೆ ಭೇಟಿ ನೀಡುವ ವೇಳೆ ಪ್ರಜ್ವಲ್ ರೇವಣ್ಣ ವಿಚಾರ ತಿಳಿದು ಆಘಾತವಾಯಿತು. ಈ ಸುದ್ದಿಯಿಂದ ಆದ ಆಘಾತ ಮತ್ತು ನೋವಿನಿಂದ ನನಗೆ ಕೆಲವೇ ನಿಮಿಷ ಬೇಕಾಯಿತು. ನನಗೆ ಮಾತ್ರವಲ್ಲ, ನನ್ನ ಕುಟುಂಬ, ಸ್ನೇಹಿತರು, ಪಕ್ಷದ ಕಾರ್ಯಕರ್ತರಿಗೆ ಆಘಾತವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಲಿ ಎಂದು ಈಗಾಗಲೇ ನಾನು ಹೇಳಿಕೆ ನೀಡಿದ್ದೇನೆ. ಪ್ರಕರಣ ಹೊರಗೆ ಬಂದ ನಂತರ ನಾನು ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಂತರ ಕಾಯ್ದುಕೊಂಡಿದ್ದೇವೆ ಎಂದು ದೇವೇಗೌಡರು ಹೇಳಿದ್ದಾರೆ.