ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಬಂದಿರುವ ಆನೆಗಳ ಜಗಳದಿಂದ ಕೆಲವು ಸಮಯ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ದಸರಾ ಆನೆಗಳಾದ ಧನಂಜಯ್ ಮತ್ತು ಕಂಜನ್ ನಡುವೆ ಜಗಳ ಆಗಿದ್ದರಿಂದ ಶಾಂಪುರ ಶಿಬಿರದಿಂದ ಬಂದಿರುವ ಕಂಜನ್ ಆನೆಯನ್ನು ಧನಂಜಯ್ ಓಡಿಸಿಕೊಂಡು ಹೋಗಿದೆ. ಮೈಸೂರಿನ ಬೀದಿಗಳಲ್ಲಿ ಆನೆಗಳು ಓಡಿದ್ದರಿಂದ ಜನದಟ್ಟಣೆ ಕಡಿಮೆ ಇದ್ದಿದ್ದರಿಂದ ಯಾವುದೇ ಅನಾಹುತ ಆಗಿಲ್ಲ.
ಅರಮನೆ ಜಯ ಮಾರ್ತಾಂಡ ಮುಖ್ಯದ್ವಾರದ ಪಕ್ಕದ ಕೋಡಿ ಸೋಮೇಶ್ವರ ದೇಗುಲದ ದ್ವಾರದಿಂದ ಹೊರಬಂದಿದ್ದ ಆನೆಗಳು ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತೆಗೆ ಎರಡೂ ನುಗ್ಗಿವೆ. ಏಕಾಏಕಿ ಆನೆಗಳು ಓಡಿ ಬಂದಿದ್ದನ್ನು ನೋಡಿದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಕೊನೆಗೆ ಧನಂಜಯ ಆನೆಯ ಮಾವುತ ಸಮಯಪ್ರಜ್ಞೆ ತೋರಿ ಕಡಿವಾಣ ಹಾಕಿದ್ದರಿಂದ ಶಾಂತಗೊಂಡಿದ್ದು, ಎರಡೂ ಆನೆಗಳನ್ನು ನಂತರ ಅರಮನೆಯೊಳಗೆ ಕರೆದೊಯ್ಯಲಾಯಿತು.
ಶುಕ್ರವಾರ ಸಂಜೆ 7:30ರ ಸುಮಾರಿಗೆ ಊಟ ಕೊಡುವಾಗ ಧನಂಜಯ ಹಾಗೂ ಕಂಜನ್ ಆನೆಗಳ ಮಧ್ಯೆ ಜಗಳ ಆಗಿದೆ. ಪ್ರತಿ ಬಾರಿ ಆನೆಗಳಿಗೆ ಊಟ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿರುತ್ತಿತ್ತು, ನಿನ್ನೆ ರಾತ್ರಿ ಊಟ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿ ಇಲ್ಲದ ಕಾರಣ ಧನಂಜಯ ಆನೆ ಕಂಜನ್ ಆನೆ ಮೇಲೆ ಜಗಳಕ್ಕೆ ಬಿದಿದ್ದೆ. ಧನಂಜಯ ಆನೆ ಕಂಜನ್ ಆನೆಯನ್ನ ಓಡಿಸಿಕೊಂಡು ಹೋಗಿದ್ದಾನೆ ಎಂದು ಅರಣ್ಯಾಧಿಕಾರಿಗಳು ಘಟನೆಯನ್ನು ವಿವರಿಸಿದ್ದಾರೆ.
ಕಂಜನ್ ಆನೆ ಏಕಾಏಕಿ ಓಡಿದ್ದರಿಂದ ಮಾವುತ ಕೆಳಗೆ ಜಿಗಿದಿದ್ದಾನೆ. ಅರಮನೆಯಿಂದ ಹೊರಗೆ ಹೋಗುತ್ತಿದ್ದಂತೆ ಧನಂಜಯ ಕಂಟ್ರೋಲ್ ಬಂದಿದೆ, ಈ ಏಕಾಏಕಿ ಆಗಿದ್ದರಿಂದ ಸ್ವಲ್ಪ ಗೊಂದಲ ಉಂಟಾಗಿದೆ. ಕಂಜನ್ ಮತ್ತು ಧನಂಜಯ ಆನೆಗಳು ಮದ ಬಂದು ಹೀಗೆ ಮಾಡಿಲ್ಲ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಅವರು ಸ್ಪಷ್ಟಪಡಿಸಿದರು.