ಚಾಣಕ್ಯ ನಾಯಕ, ಫಿನಿಷರ್ ಎಂದೇ ಖ್ಯಾತರಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಆಡಲು ಇಳಿದಿದ್ದಲ್ಲದೇ ಗೋಲ್ಡನ್ ಡಕ್ ಗೆ ಔಟಾಗಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಧರ್ಮಶಾಲಾದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ 9 ವಿಕೆಟ್ ಗೆ 167 ರನ್ ಗಳಿಸಿತು. ತಂಡ ನಾಟಕೀಯ ಕುಸಿತ ಅನುಭವಿಸುತ್ತಿದ್ದರೂ ಧೋನಿ ಸಾಮಾನ್ಯವಾಗಿ ಬರಬೇಕಿದ್ದ 5-6ನೇ ಕ್ರಮಾಂಕದಲ್ಲಿ ಬಾರದೇ 9ನೇ ಕ್ರಮಾಂಕದಲ್ಲಿ ಬಂದು ಅಚ್ಚರಿ ಮೂಡಿಸಿದರು.
ಧೋನಿ 9ನೇ ಕ್ರಮಾಂಕದಲ್ಲಿ ಬಂದಿದ್ದರೂ ಅಲ್ಲದೇ ಎದುರಿಸಿದ ಮೊದಲ ಎಸೆತದಲ್ಲೇ ಹರ್ಷಲ್ ಪಟೇಲ್ ಅವರ ಯಾರ್ಕರ್ ಗೆ ಉತ್ತರಿಸುವಲ್ಲಿ ವಿಫಲರಾಗಿ ಬೌಲ್ಡ್ ಆಗಿ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಹರ್ಷಲ್ ಪಟೇಲ್ ಮಾರಕ ದಾಳಿಗೆ ಸ್ವತಃ ಆಘಾತಕ್ಕೆ ಒಳಗಾಗಿದ್ದು ಧೋನಿ ಮುಖಭಾವ ಹೇಳುತ್ತಿತ್ತು.
ಪಂಜಾಬ್ ಕಿಂಗ್ಸ್ ತಂಡವನ್ನು 9 ವಿಕೆಟ್ ಗೆ 139 ರನ್ ಗಳಿಗೆ ಕಟ್ಟಿಹಾಕಿದ ಚೆನ್ನೈ ಸೂಪರ್ ಕಿಂಗ್ಸ್ 28 ರನ್ ಗಳ ಭಾರೀ ಅಂತರದಿಂದ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು.