ಬೂದು ಕುಂಬಳಕಾಯಿಯಿಂದ ರುಚಿ ರುಚಿಯಾದ ಅಡುಗೆಗೆ ಮಾತ್ರವಲ್ಲ, ದೃಷ್ಟಿ ತೆಗೆಯುವುದಕ್ಕೂ ಬಳಸುತ್ತಾರೆ. ಆದರೆ ಅದನ್ನು ಬೇರೆ ಬೇರೆ ರೀತಿಯಲ್ಲಿ ಆಹಾರವಾಗಿ ಸೇವಿಸುವುದರಿಂದ ಏನೆಲ್ಲಾ ಆರೋಗ್ಯಕ್ಕೆ ಪ್ರಯೋಜನ ಎಂಬುದು ನಿಮಗೆ ಗೊತ್ತೇ?
ಬೂದು ಕುಂಬಳಕಾಯಿಯಿಂದ ಸಾರು, ಸಾಂಬಾರು, ಮಜ್ಜಿಗೆ ಹುಳಿ, ಹಲ್ವಾ, ಅದರ ಸಿಪ್ಪೆಯಿಂದ ಪಲ್ಯ, ತಿರುಳಿನಿಂದ ಜ್ಯೂಸ್, ಡ್ರೈಸೀಡ್ಸ್ ಆಗಿ ಬೀಜಗಳನ್ನು ಸಾಮಾನ್ಯವಾಗಿ ಚಪ್ಪರಿಸಿಕೊಂಡು ತಿನ್ನೋದು ನಮಗೆಲ್ಲ ಗೊತ್ತು.
ಆದರೆ ಬೂದು ಕುಂಬಳಕಾಯಿ ಆರೋಗ್ಯದ ಖಜಾನೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್, ಸತು, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್, ನಿಯಾಸಿನ್, ಥಯಾಮಿನ್, ವಿಟಮಿನ್ ಸಿ ಮತ್ತು ರೈಬೋಫ್ಲಾವಿನ್‌ನಂತಹ ವಿಟಮಿನ್‌ಗಳು, ಖನಿಜಗಳು, ಪೋಷಕಾಂಶಗಳು ಹೇರಳವಾಗಿವೆ.
ಶರೀರದಲ್ಲಿ ಉಷ್ಣ, ನೋವು ಕಂಡುಬಂದರೆ ಕುಂಬಳಕಾಯಿ ಗೊಜ್ಜು ತಿಂದರೆ ಬಹಳಷ್ಟು ಪರಿಣಾಮಕಾರಿ. ಮೂತ್ರಕೋಶದಲ್ಲಿ ಕಲ್ಲು, ಸೋಂಕಿನ ಸಮಸ್ಯೆ, ಉರಿಮೂತ್ರ ಇದ್ದರೆ ಜ್ಯೂಸ್ ಮಾಡಿಕೊಂಡು ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಕೊಲೆಸ್ಟ್ರಾಲ್ ಸಮಸ್ಯೆಯಿದ್ದರೆ ಪ್ರತಿನಿತ್ಯ ಜ್ಯೂಸ್ ಮಾಡಿ ಅದಕ್ಕೆ ಸ್ವಲ್ಪ ಕಾಳುಮೆಣಸು ಪುಡಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದಿನನಿತ್ಯ ಕುಡಿದರೆ ಕೊಬ್ಬು ಕರಗುತ್ತದೆ.
ಬೂದು ಕುಂಬಳಕಾಯಿಯ ಬೀಜದ ತೈಲದಿಂದ ತಲೆಗೆ ಮಸಾಜ್ ಮಾಡುವುದರಿಂದ ತಲೆನೋವು ನಿವಾರಣೆ ಜೊತೆಗೆ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ನೆನಪಿನ ಶಕ್ತಿ ಸುಧಾರಿಸುತ್ತದೆ. ಕುಂಬಳಕಾಯಿ ರಸವನ್ನು ಸೇವಿಸುವುದರಿಂದ ದಾಹ ನಿವಾರಣೆಯಾಗುವುದು. ಹೊಟ್ಟೆಯಲ್ಲಿ ಹುಳ ತುಂಬಿದ್ದರೆ ಕುಂಬಳಕಾಯಿ ಬೀಜವನ್ನು ಅರೆದು ಮುದ್ದೆ ಮಾಡಿ ಸೇವಿಸಿದರೆ ಪರಿಣಾಮಕಾರಿ.
ಬೂದು ಕುಂಬಳಕಾಯಿಯಲ್ಲಿ ಫೈಬರ್ ಹೆಚ್ಚಿರುವುದರಿಂದ ಮಲಬದ್ಧತೆ, ಗ್ಯಾಸ್ ಮತ್ತು ಅಸಿಡಿಟಿಯಂತಹ ಅಜೀರ್ಣ ಸಮಸ್ಯೆಗಳಿರುವವರು ಹೆಚ್ಚು ಬಳಸಬೇಕು. ಇದರಿಂದ ತಯಾರಿಸಿದ ಕೂಷ್ಮಾಂಡ ಲೇಹವನ್ನು ಪ್ರತಿನಿತ್ಯ ಸ್ವಲ್ಪ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು.