ನನ್ನ ಮದುವೆ ದಿನಾಂಕ ನಿಗದಿಪಡಿಸಿದ್ದೇ ದರ್ಶನ್. ಹಾಗಾಗಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಬಂದಿದ್ದೆ ಎಂದು ನಿರ್ದೇಶಕ ತರುಣ್ ಸುಧೀರ್ ತಿಳಿಸಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲಿನ ನಿಯಮಗಳ ಪ್ರಕಾರ ಆಮಂತ್ರಣ ಪತ್ರ ಕೊಡುವಂತಿಲ್ಲ. ಹಾಗಾಗಿ ಕೊಡಲು ಆಗಲಿಲ್ಲ. ಆದರೆ ಅವರ ಆಶೀರ್ವಾದ ಪಡೆಯಲು ಬಂದಿದ್ದೆ ಎಂದರು.
ದರ್ಶನ್ ಗೆ ನನ್ನ ಮೇಲೆ ಯಾವಾಗಲೂ ಪ್ರೀತಿ ಇದ್ದೇ ಇದೆ. ಆಗಸ್ಟ್ 10 ಮತ್ತು 11ರಂದು ಸೋನಾಲ್ ಜೊತೆ ಮದುವೆ ದಿನಾಂಕ ನಿಗದಿಪಡಿಸಿದ್ದೇ ಅವರು. ಆ ದಿನಾಂಕದಂದು ಮದುವೆಗೆ ಬರಲು ಸಾಧ್ಯವೇ ಎಂದು ಪ್ರಯತ್ನಿಸಿದೆ, ಅವರು ಯಾವುದೇ ತಪ್ಪು ಮಾಡಿಲ್ಲ ಎಂಬುದು ನನ್ನ ನಂಬಿಕೆ ಎಂದು ಅವರು ಹೇಳಿದರು.
ಇದೇ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ದರ್ಶನ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದೆ. ಅವರು ಯೋಗ, ವ್ಯಾಯಾಮ ಮಾಡಿ ಆರೋಗ್ಯವಾಗಿದ್ದಾರೆ. ಸ್ವಲ್ಪ ಸಣ್ಣ ಆಗಿದ್ದಾರೆ ಎಂದು ನುಡಿದರು.