ಗೋಬಿ, ಕಾಟನ್ ಕ್ಯಾಂಡಿ, ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿಷೇಧ ಹೇರಿದ ಬೆನ್ನಲ್ಲೇ ಇದೀಗ ಪಾನಿಪುರಿಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ 5 ಕೆಮಿಕಲ್ ಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನ ಸಂಗ್ರಹ ಮಾಡಿ ಪರೀಕ್ಷಿಸಿದೆ. ಅದರಲ್ಲಿ ಬೆಂಗಳೂರಿನ 49 ಕಡೆಗಳಲ್ಲಿ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್‌ಗಳು ಇರೋದು ಪತ್ತೆಯಾಗಿದೆ.
ಪಾನಿಪೂರಿಗೆ ಬಳಸುವ ಸಾಸ್, ಮೀಠಾ, ಖಾರದ ಪುಡಿಯಲ್ಲಿ 5 ಬಗೆಯ ರಾಸಾಯನಿಕ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಪಾನಿಪೂರಿಯಲ್ಲಿನ ಕೆಮಿಕಲ್ ಮಿಶ್ರಿತ ಪದಾರ್ಥಗಳ ಬಳಕಗೆ ಆರೋಗ್ಯ ಇಲಾಖೆ ನಿಷೇಧ ಹೇರುವ ಸಾಧ್ಯತೆ ಇದೆ.
ಈ ಹಿಂದೆ ಕೆಲವು ಆಹಾರಗಳಲ್ಲಿ ಕೃತಕ ಬಣ್ಣದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್ ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನ ನಿಷೇಧಿಸಲಾಗಿತ್ತು.
ಇದೀಗ ಪಾನಿಪುರಿ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದ್ದು, ಈ ವಸ್ತುಗಳನ್ನು ಬ್ಯಾನ್ ಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.