ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆಗೆ ಕೆಲವೇ ಕ್ಷಣಗಳ ಮುನ್ನ ವಿಧ್ವಂಸಕರು ರೈಲು ಸಂಚಾರದ ನೆಟ್ ವರ್ಕ್ ಮೇಲೆ ದಾಳಿ ನಡೆಸಿದ್ದರಿಂದ ಫ್ರಾನ್ಸ್ ಹೈಸ್ಪೀಡ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಒಲಿಂಪಿಕ್ಸ್ ಉದ್ಘಾಟನೆಗೆ ಕೇವಲ ಒಂದು ಗಂಟೆ ಬಾಕಿ ಇರುವಾಗ ಬೆಂಕಿ ಹಚ್ಚುವುದು, ನೆಟ್ ವರ್ಕ್ ಲೈನ್ ಕತ್ತರಿಸುವುದು ಸೇರಿದಂತೆ ನಾನಾ ದುಷ್ಕೃತ್ಯಗಳು ನಡೆದ ಹಿನ್ನೆಲೆಯಲ್ಲಿ ಹಲವು ದೇಶಗಳ ಸಂಪರ್ಕ ಹೊಂದಿದ ರೈಲು ಮಾರ್ಗದಲ್ಲಿ ಸಂಚಾರ ವ್ಯತ್ಯಯಗೊಂಡಿದ್ದು, ಸುಮಾರು 8 ಲಕ್ಷ ಪ್ರಯಾಣಿಕರಿಗೆ ಸಮಸ್ಯೆ ಆಗಿದೆ.
ಪ್ರತಿಷ್ಠಿತ ಕ್ರೀಡಾಕೂಟವಾದ ಒಲಿಂಪಿಕ್ಸ್ ನಲ್ಲಿ ಹಾನಿ ಮಾಡಲು ಸಂಘಟಿತ ಪ್ರಯತ್ನ ಇದಾಗಿದೆ ಎಂದು ಫ್ರಾನ್ಸ್ ರಕ್ಷಣಾ ಇಲಾಖೆ ಹೇಳಿದೆ. ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್ ಇತಿಹಾಸದಲ್ಲೇ ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ನಡೆಯುತ್ತಿರುವ ಕ್ರೀಡಾಕೂಟ ಎಂದು ವರದಿಗಳು ಹೇಳಿವೆ.
ಫ್ರಾನ್ಸ್ ನಲ್ಲಿ ಐಸಿಎಸ್ ಉಗ್ರರು, ನಕ್ಸಲರು ಮತ್ತು ಬಂಡುಕೋರರ ಹಾವಾಳಿ ಹೆಚ್ಚಾಗಿದ್ದು, ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್ ವೀಕ್ಷಿಸಲು ಬಂದಿದ್ದ ವಿದೇಶೀ ಮಹಿಳೆಯ ಮೇಲೆ 5 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಅರ್ಜೆಂಟೀನಾ ಮತ್ತು ಮೊರಾಕ್ಕೊ ನಡುವಿನ ಒಲಿಂಪಿಕ್ಸ್ ನ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಪ್ರೇಕ್ಷಕರು ಮೈದಾನದಲ್ಲಿ ಬಾಟಲಿಗಳನ್ನು ಎಸೆದು ದಾಂಧಲೆ ನಡೆಸಿದ್ದರಿಂದ 4 ಗಂಟೆಗಳ ನಂತರ ಮೈದಾನ ಖಾಲಿ ಮಾಡಿಸಿ ಪಂದ್ಯ ಮುಂದುವರಿಸಲಾಗಿತ್ತು. ಬಲಿಷ್ಠ ಅರ್ಜೆಂಟೀನಾ ತಂಡ 2-1 ಗೋಲುಗಳಿಂದ ಮೊರಾಕ್ಕೊ ವಿರುದ್ಧ ಸೋಲುಂಡಿದ್ದರು. ಪಂದ್ಯದ ಆಯೋಜನೆ ಕುರಿತು ಫೀಫಾಗೆ ದೂರು ಸಲ್ಲಿಸಿತ್ತು.