ಮಂಗಳೂರಿನ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ರಾಮಸೇನೆಯ 9 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪದ ಕಲರ್ಸ್ ಮಸಾಜ್ ಸೆಂಟರ್ ಮೇಲೆ ಗುರುವಾರ ಏಕಾಏಕಿ ನುಗ್ಗಿದ ರಾಮಸೇನೆಯ ಕಾರ್ಯಕರ್ತರು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು.
ದಾಳಿ ಪ್ರಕರಣದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಸೇರಿದಂತೆ ೯ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಮಸಾಜ್ ಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿದ ರಾಮಸೇನೆ ಕಾರ್ಯಕರ್ತರು, ಪೀಠೋಪಕರಣಗಳನ್ನು ಹಾನಿ ಮಾಡಿದ್ದೂ ಅಲ್ಲದೇ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು.
ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಅಕ್ರಮ ಚಟುವಟಿಕೆ ನಡೆಯುತ್ತಿದ್ದರೆ ಪೊಲೀಸರಿಗೆ ದೂರು ನೀಡಬೇಕಿತ್ತು. ಆದರೆ ಏಕಾಏಕಿ ದಾಳಿ ಮಾಡಿ ನೈತಿಕ ಪೊಲೀಸ್ ಗಿರಿ ನಡೆಸುವುದು ಸರಿಯಲ್ಲ ಎಂದು ಸಾರ್ಜಜನಿಕರು ಆಗ್ರಹಿಸಿದ್ದರು.
ಘಟನೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಗೃಹ ಸಚಿವ ಜಿ.ಪರಮೇಶ್ವರ್, ಪ್ರಕರಣವನ್ನು ಪರಿಶೀಲಿಸಲಾಗುತ್ತಿದ್ದು, ರಾಮಸೇನೆ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.


