ಸಾಲಗಾರರ ಕಾಟ ತಾಳಲಾರದೇ ಪತ್ನಿ ಆತ್ಮಹತ್ಯೆ ಸುದ್ದಿ ಕೇಳಿ ಅದೇ ಬಾವಿಗೆ ಹಾರಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನಲ್ಲೂ ದಂಪತಿ ಒಂದಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಸಾಲಬಾಧೆ ತಾಳಲಾರದೇ ನಟೇಶ್ (55) ಮತ್ತು ಚಿನ್ನಮ್ಮ (45 ಆತ್ಮಹತ್ಯೆ ಮಾಡಿಕೊಂಡ ರೈತ ದಂಪತಿ. ಇವರು ತಮ್ಮದೇ ಜಮೀನಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಆಲೂರು ತಾಲೂಕಿನ ಪಾಳ್ಯ ಬಳಿಯ ಕಟ್ಟೆಗದ್ದೆ ಗ್ರಾಮದಲ್ಲಿ ನಡೆದಿದೆ.
ಈ ದಂಪತಿ ಬ್ಯಾಂಕ್ ಮತ್ತು ಕೈಸಾಲವಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಆದರೆ ತಾವು ಬೆಳೆದಿದ್ದ ಬೆಳೆ ಕೈಕೊಟ್ಟಿತ್ತು. ಹೀಗಾಗಿ ನಿರೀಕ್ಷಿತ ಪ್ರಮಾಣದ ಆದಾಯದ ಆಸೆ ಕನಸಿನ ಮಾತಾಗಿತ್ತು.
ಸಾಲ ತೀರಿಸಲು ಪರದಾಡುತ್ತಿದ್ದ ದಂಪತಿಗೆ ಸಾಲ ಕೊಟ್ಟವರು ನಿತ್ಯವೂ ಒತ್ತಾಯ ಮಾಡುತ್ತಿದ್ದರು. ಒಂದೆಡೆ ಸಾಲಗಾರರ ಕಾಟ, ಮತ್ತೊಂದೆಡೆ ಬ್ಯಾಂಕ್ ಸಾಲ ತೀರಿಸುವುದು ಹೇಗೆ ಎಂದು ದಂಪತಿ ಚಿಂತೆಗೆ ಬಿದ್ದಿದ್ದರು.
ಸಾಲಗಾರರ ಕಾಟ ತಾಳಲಾರದೇ ಚಿಂತಾಕ್ರಾಂತರಾದ ಚಿನ್ನಮ್ಮ, ಬುಧವಾರ ತಡರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಎದ್ದಾಗ ಪತ್ನಿ ಮನೆಯಲ್ಲಿ ಇಲ್ಲದೇ ಇದ್ದುದನ್ನು ಕಂಡ ನಟೇಶ್ ಆತಂಕಗೊಂಡು, ಹುಡುಕಾಟ ನಡೆಸಿದ್ದರು.
ಕಡೆಗೆ ಬಾವಿಗೆ ಹಾರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ತಿಳಿದ ಕೂಡಲೇ ಪತಿಯೂ ಸಾವಿನ ಹಾದಿ ತುಳಿದಿದ್ದಾರೆ. ಅದೇ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಎರಡೂ ಮೃತದೇಹಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ.
ಸಾಲದ ಶೂಲಕ್ಕೆ ಅಂಜಿ ದಂಪತಿ ಸಾವಿಗೆ ಶರಣಾಗಿರುವ ಘಟನೆ ಬಹುತೇಕರಲ್ಲಿ ಕಣ್ಣೀರು ತರಿಸಿದೆ.