ರಾಜ್ಯ ರಾಜಕಾರಣದ ಬಗ್ಗೆ ನೋಡಿದರೂ ನೋಡದಂತೆ ಇರಬೇಕಾಗಿದೆ. ಆದರೆ ಸದ್ಯಕ್ಕೆ ಸಿಎಂ ಸ್ಥಾನದ ಬದಲಾವಣೆಯೂ ಕಾಣಿಸುತ್ತಿಲ್ಲ ಎಂದು ಕೋಡಿಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯಲ್ಲಿರುವ ಕೋಡಿಮಠದ ಸ್ವಾಮೀಜಿ ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ರಾಜಕಾರಣಿಗಳ ವಿಚಾರ ಮಾತನಾಡುವಾಗಲೂ ನಾವು ಬಹಳ ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದರು.
ರಾಜ್ಯ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ನಾಯಿ-ನರಿಗಳು ಹಾರಾಡುತ್ತವೆ. ಆದರೆ ಸರ್ಕಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಯಾವುದಕ್ಕೂ ಶ್ರಾವಣದಲ್ಲಿ ಈ ಬಗ್ಗೆ ಸ್ಪಷ್ಟ ಉತ್ತರ ನೀಡುತ್ತೇನೆ ಎಂದು ಸ್ವಾಮೀಜಿ ಹೇಳಿದ್ದರು.
ಒಬ್ಬ ಸನ್ಯಾಸಿ ತಪಸ್ಸಿಗೆ ಕುಳಿತಿದ್ದನಂತೆ. ಅದೇ ವೇಳೆ ಒಬ್ಬ ಬೇಡ ಜಿಂಕೆಯನ್ನು ಅಟ್ಟಿಸಿಕೊಂಡು ಬಂದನಂತೆ. ಸನ್ಯಾಸಿ ಬಳಿ ಬಂದು, ‘ಏನ್ ಸ್ವಾಮಿ ಇಲ್ಲಿ ಜಿಂಕೆ ಓಡಿಹೋಯಿತೇ’ ಎಂದು ಪ್ರಶ್ನಿಸಿದನಂತೆ. ಸನ್ಯಾಸಿ ಉಭಯ ಸಂಕಟಕ್ಕೆ ಬಿದ್ದ. ಹೌದು ಎಂದರೆ ಜಿಂಕೆಯನ್ನು ಕೊಲ್ಲುವಂತೆ ಮಾಡಿದ ಪಾಪ ಬರುತ್ತದೆ. ಅಲ್ಲ ಎಂದರೆ ಸುಳ್ಳಾಡಿದ ಪಾಪ ಬರುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆತ, ‘ಯಾವುದು ನೋಡಿತೋ ಅದು ಮಾತನಾಡಲ್ಲ. ಯಾವುದು ಮಾತನಾಡುತ್ತದೆಯೋ ಅದು ನೋಡಿಲ್ಲ’ ಎಂದನಂತೆ. ಕಣ್ಣು ನೋಡುತ್ತದೆ ಆದರೆ ಮಾತನಾಡಲ್ಲ. ಬಾಯಿ ಮಾತನಾಡುತ್ತದೆ ಆದರೆ ನೋಡಲ್ಲ ಎಂದು ಮಾರ್ಮಿಕವಾಗಿ ಕಥೆಯ ಮೂಲಕ ಸ್ವಾಮೀಜಿ ಹೇಳಿದರು.
ರಾಷ್ಟ್ರ ರಾಜಕಾರಣದಲ್ಲಿ ನಾನು ಈ ಹಿಂದೆಯೇ ಮಹಾಭಾರತದ ಚಕ್ರವ್ಯೂಹದ ಕಥೆಯನ್ನು ಉಲ್ಲೇಖಿಸಿ ಒಂದು ವಿಚಾರ ಹೇಳಿದ್ದೆ. ವೀರನಾಗಿದ್ದ ಅಭಿಮನ್ಯುವನ್ನು ಕರ್ಣ ಎಲ್ಲ ಸೇರಿ ಮೋಸದಿಂದ ಕೊಂದಿದ್ದರು. ಮಹಾಭಾರತದಲ್ಲಿ ಕೃಷ್ಣ ಇದ್ದ ಅಂತ ಭೀಮ ಗೆದ್ದ, ದುರ್ಯೋಧನ ಸೋತ. ಇಲ್ಲಿ ಕೃಷ್ಣ ಇಲ್ಲ. ದುರ್ಯೋಧನ ಗೆಲ್ಲುತ್ತಾನೆ, ಭೀಮ ಸೋಲುತ್ತಾನೆ ಎಂದಿದ್ದೆ. ಅದು ನಡೆಯುತ್ತಿದೆ ಎಂದು ಅವರು ಪುನರುಚ್ಚರಿಸಿದರು.
ಕಳೆದ ತಿಂಗಳು ಹೇಳಿದ್ದೆ. ಈ ಬಾರಿ ಉತ್ತಮ ಮಳೆಯಾಗಲಿದೆ. ಕ್ರೋಧ ಸಂವತ್ಸರ ಆಗಿರುವುದರಿಂದ ಜಲ ಕಂಟಕ, ಅಗ್ನಿ ಕಂಟಕ ಇದೆ ಎಂದು ಇದು ನಿಜವಾಗಿದೆ. ಕರ್ನಾಟಕ ಮತ್ತು ಕೇರಳದಲ್ಲಿ ಭಾರೀ ಮಳೆಯಿಂದ ದುರಂತಗಳು ಸಂಭವಿಸುತ್ತಿವೆ ಎಂದು ಅವರು ಹೇಳಿದರು.