ಚಾಲಕನ ನಿಯಂತ್ರಣ ತಪ್ಪಿದ ಕಾರು ವಿಶ್ವೇಶ್ವರಯ್ಯ(ವಿಸಿ) ನಾಲೆಗೆ ಉರುಳಿ ಮೂವರು ಸಾವನ್ನಪ್ಪಿದ್ದು, ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಸೋಮವಾರ ಮಧ್ಯಾಹ್ನ ತಾಲೂಕಿನ ಮಾಚಹಳ್ಳಿ ಬಳಿ ಸಂಭವಿಸಿದೆ.
ಘಟನೆಯಲ್ಲಿ ಮಂಡ್ಯ ನಗರದ ಹಾಲಹಳ್ಳಿ ಸ್ಲಂ ನಿವಾಸಿಗಳಾದ ಕಾರು ಮಾಲಕ ಫಯಾಜ್ ಅಲಿಯಾಸ್ ಬ್ಯಾಟರಿ, ಅಸ್ಲಂ ಪಾಷ ಹಾಗೂ ಪೀರ್ ಖಾನ್ ಸಾವನ್ನಪ್ಪಿದ್ದು, ತೀವ್ರ ಅಸ್ವಸ್ಥಗೊಂಡಿರುವ ನಯಾಜ್ ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲೆಯ ಪಕ್ಕದ ತಿರುವು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ನಾಲೆಗೆ ಉರುಳಿದ್ದು, ಸ್ಥಳೀಯರು ಇಬ್ಬರನ್ನು ನೀರಿನಿಂದ ತಕ್ಷಣ ಹೊರತೆಗೆದಿದ್ದಾರೆ. ಇವರಲ್ಲಿ ನಯಾಜ್ ಬದುಕಿದ್ದು, ಆ ವೇಳೆಗೆ ಓರ್ವ ಸಾವನ್ನಪ್ಪಿದ್ದ ಎಂದು ಸ್ಥಳೀಯರು ತಿಳಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಮುಳುಗಿದ್ದ ಕಾರು ಮತ್ತು ಇನ್ನಿಬ್ಬರ ಮೃತದೇಹಗಳನ್ನು ಸುಮಾರು ವೇಳೆ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.
ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮತ್ತು ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರ ಆಕ್ರೋಶ:
ನಾಲೆ ತಿರುವಿನಲ್ಲಿ ತಡೆಗೋಡೆ ಇಲ್ಲದ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಈ ಹಿಂದೆ ಬನಘಟ್ಟ ಬಳಿ ಕಾರು ಉರುಳಿ ಐದು ಮಂದಿ ಜಲಸಮಾಧಿ ಸೇರಿದಂತೆ ಹಲವು ಬಾರಿ ಅಪಘಾತಗಳು ಸಂಭವಿಸಿವೆ. ಆದರೆ, ಸಂಬಂಧಪಟ್ಟ ಇಲಾಖೆಯವರು ತಡೆಗೋಡೆ ನಿರ್ಮಿಸಲು ಮುಂದಾಗಿಲ್ಲ ಎಂದು ಸುತ್ತಮುತ್ತಲ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲಾಡಳಿತ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ನೀಡುತ್ತದೆ. ಆದರೆ, ಕೆಲ ದಿನಗಳಲ್ಲಿ ಪ್ರಕರಣ ಜನರ ಮನಸ್ಸಿನಿಂದ ಮರೆಯಾಗುತ್ತಿದ್ದಂತೆ ಸುಮ್ಮನಾಗುತ್ತಾರೆ. ಪ್ರತಿದಿನ ಈ ಮಾರ್ಗದಲ್ಲಿ ಬಸ್ ಸೇರಿದಂತೆ,ಹತ್ತಾರು ಶಾಲಾ ವಾಹನಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಇನ್ನಾದರೂ ಜಿಲ್ಲಾಡಳಿತ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಈ ಬಗ್ಗೆ ಗಮನಹರಿಸಿ ತಡಗೋಡೆ ನಿರ್ಮಿಸಬೇಕು. ಇಲ್ಲದಿದ್ದರೆ ಉಗ್ರಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
Leave a Reply