ನನ್ನ ಅಧಿಕಾರ ಮೊಟಕುಗೊಳಿಸಲು ಪ್ರಯತ್ನಿಸಬೇಡಿ. ನಿಮ್ಮ ಪ್ರಯತ್ನಗಳು ಕೇವಲ ಪ್ರಚಾರಕ್ಕಾಗಿ ಎಂಬುದು ತಿಳಿದಿದೆ. ನಾನು ಹೆಚ್ಚು ಮಾತನಾಡಿದರೆ ನಿಮಗೆ ಸಮಸ್ಯೆ ಆಗಬಹುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕಿಡಿಕಾರಿದ್ದಾರೆ.
ಚುನಾವಣಾ ಬಾಂಡ್ ವಿಷಯದಲ್ಲಿ ನ್ಯಾಯಾಲಯದ ಅಧಿಕಾರ ಪ್ರಶ್ನಿಸಿ ರಾಷ್ಟ್ರಪತಿಗಳಿಗೆ ವಕೀಲರ ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಅದಿಶ್ ಅಗರ್ ವಾಲ್ ಪತ್ರ ಬರೆದಿರುವ ವಿಷಯದ ಕುರಿತು ಚಂದ್ರಚೂಡ್ ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದರು.
ಚುನಾವಣಾ ಬಾಂಡ್ ಹೆಸರಿನಲ್ಲಿ ನಡೆಯುತ್ತಿರುವ ವಿಚಾರಣೆ ನ್ಯಾಯಾಲಯಕ್ಕೆ ಹಾಗೂ ನ್ಯಾಯಾಲಯದ ವ್ಯಾಪ್ತಿಯಲ್ಲಷ್ಟೇ ಇರಲಿ. ನಮ್ಮ ಅಧಿಕಾರವನ್ನು ಪ್ರಶ್ನಿಸಿ ಅಥವಾ ಅದನ್ನು ಮೊಟಕುಗೊಳಿಸುವ ಪ್ರಯತ್ನ ಮಾಡಬೇಡಿ. ನಿಮ್ಮ ಪ್ರಯತ್ನಗಳು ರಾಜಕೀಯ ಪ್ರೇರಿತವಾಗಿವೆ.
ಮಾಧ್ಯಮದ ಗಮನ ಸೆಳೆಯಲು ಮಾಡುತ್ತಿದ್ದಿರ ಎಂಬುದು ಗೊತ್ತಿದೆ. ಈ ವಿಷಯವನ್ನು ಇಲ್ಲಿಗೆ ಬಿಡಿ. ನಾನು ಹೆಚ್ಚು ಮಾತನಾಡಿದರೆ ನಿಮಗೆ ಸಮಸ್ಯೆ ಆಗಬಹುದು ಎಂದು ಹೇಳಿದರು.
ಚುನಾವಣಾ ಬಾಂಡ್ ವಿಷಯದಲ್ಲಿ ಸುಪ್ರೀಂಕೋರ್ಟ್ ಕಠೋರವಾಗಿ ನಡೆದುಕೊಳ್ಳುತ್ತಿದೆ. ಈ ಬಗ್ಗೆ ಮೃದು ಧೋರಣೆ ತಳೆಯಬೇಕು ಎಂದು ವಕೀಲ ಅದಿಶ್ ಅಗರ್ ವಾಲ್ ಮಾಡಿದ ಮನವಿಯನ್ನು ಮತ್ತೊಬ್ಬ ನ್ಯಾಯಮೂರ್ತಿಗಳು ತಿರಸ್ಕರಿಸಿದರು.
ರಾಜಕೀಯ ಪಕ್ಷಗಳಿಗೆ ನೀಡಲಾಗಿರುವ ಚುನಾವಣಾ ಬಾಂಡ್ ವಿವರಗಳನ್ನು ಆಯ್ಕೆ ಮಾಡಿ ಬಹಿರಂಗಪಡಿಸದೇ ಎಲ್ಲಾ ವಿವರಗಳನ್ನು ಬಹಿರಂಗಪಡಿಸಬೇಕು. ಇದರಲ್ಲಿ ತಾರತಮ್ಯ ಮಾಡಬಾರದು ಎಂದು ಸುಪ್ರೀಂಕೋರ್ಟ್ ಮತ್ತೊಮ್ಮೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಖಡಕ್ ಸೂಚನೆ ನೀಡಿತು.