ಇಂದು ಮನೆಗಳಲ್ಲಿ ಸಕ್ಕರೆ ಜಾಗವನ್ನು ಬೆಲ್ಲ ಆಕ್ರಮಿಸಿಕೊಳ್ಳುತ್ತಿದೆ. ಆದರೆ ಈ ಬೆಲ್ಲವನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವುದು ಸ್ವಲ್ಪ ಮಟ್ಟಿಗೆ ತಲೆನೋವು ಕೂಡ ಹೌದು. ಗಾಳಿಯಾಡಿದರೆ, ತೇವಾಂಶವಿರುವ ಜಾಗದಲ್ಲಿಟ್ಟರೆ ಬೆಲ್ಲ ಕರಗಿ ಹೋಗುವುದು, ಫಂಗಸ್ ಬೆಳೆಯುವುದು ಸಾಮಾನ್ಯ.
ಹೀಗಾಗಿ ಮಳೆಗಾಲದಲ್ಲಿ ಬೆಲ್ಲವನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸಿಡುವುದು ಒಳ್ಳೆಯದು. ಆದರೆ ಪ್ಲಾಸ್ಟಿಕ್ ಕಂಟೈನರ್ ಬದಲಿಗೆ ಸ್ಟೀಲ್ ಕಂಟೈನರ್‌ನಲ್ಲಿ ಬೆಲ್ಲವನ್ನು ತುಂಬಿಡಿ. ಪ್ಲಾಸ್ಟಿಕ್ ಕಂಟೆನೈರ್‌ನಲ್ಲಿ ಇಟ್ಟರೆ ಬಣ್ಣ ಬದಲಾಗುವ ಸಾಧ್ಯತೆ ಇದೆ. ಸ್ಟೀಲ್ ಕಂಟೈನರ್‌ನಲ್ಲಿ ಗಾಳಿಯಾಡದಂತೆ ಹಾಕಿಡಬೇಕು. ಗಾಳಿಯಾಡದಂತೆ ಜಿಪ್ ಇರುವ ಕವರ್‌ನಲ್ಲಿಟ್ಟರೂ ತೊಂದರೆ ಇಲ್ಲ.
ಅಕ್ಕಿ ಅಥವಾ ಗೋದಿಯನ್ನು ಹಾಕಿಟ್ಟ ಡಬ್ಬಿ ಅಥವಾ ಬಾಕ್ಸಿನ ಮಧ್ಯೆ ಕವರ್‌ನಲ್ಲಿ ಬೆಲ್ಲವನ್ನು ಹಾಕಿ ಸರಿಯಾಗಿ ಕಟ್ಟಿ ಇಡುವುದರಿಂದ ಬೆಲ್ಲ ಕರಗುವುದಿಲ್ಲ. ಇದರಿಂದ ಅಕ್ಕಿ ಅಥವಾ ಗೋಧಿಗೂ ಯಾವುದೇ ಸಮಸ್ಯೆಯಾಗದು. ಬಿರಿಯಾನಿ ಎಲೆಯನ್ನು ಬಾಕ್ಸ್ ನೊಳಗೆ ಹಾಕಿ. ಅದರಲ್ಲಿ ಬೆಲ್ಲ ಹಾಕಿ ಗಟ್ಟಿಯಾಗಿ ಮುಚ್ಚಳ ಹಾಕಿ ಇಟ್ಟರೆ ಬೆಲ್ಲ ಎಲ್ಲಾ ಸೀಸನ್ ಗಳಲ್ಲಿ ಚೆನ್ನಾಗಿಯೇ ಇರುತ್ತದೆ. ಹಾಳಾಗುವ ಛಾನ್ಸೇ ಇಲ್ಲ.
ಮಣ್ಣಿನ ಪಾತ್ರೆ ಅಥವಾ ಮಣ್ಣಿನ ಮಡಿಕೆಗಳಲ್ಲಿ ಸಂಗ್ರಹಿಸಿಟ್ಟರೂ ವರ್ಷದವರೆಗೆ ಹಾಳಾಗದು, ಕರಗದು. ಆದರೆ ಮಣ್ಣಿನ ಮಡಕೆ ಬಳಸುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ.