ಭಾರತದ ಕುಸ್ತಿಪಟು ಅಮನ್ ಶೆರಾವತ್ ಚೊಚ್ಚಲ ಪ್ರವೇಶದಲ್ಲೇ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಪಂದ್ಯಕ್ಕೂ ಮುನ್ನ ದಿಢೀರನೆ ಹೆಚ್ಚಾಗಿದ್ದ 4.6 ಕೆಜಿ ತೂಕ ಇಳಿಸಲು ಅವರು ನಡೆಸಿದ 10 ಗಂಟೆಗಳ ಶ್ರಮ ಅಭೂತಪೂರ್ವವಾಗಿತ್ತು.
ಶುಕ್ರವಾರ ನಡೆದ ಪುರುಷರ 57 ಕೆಜಿ ವಿಭಾಗದಲ್ಲಿ ಅಮನ್ ಶೆರಾವತ್ 13-5 ಅಂಕಗಳಿಂದ ಪ್ಯೂಟ್ರೊ ರಿಕೊದ ಡೇರಿಯನ್ ಟೊಯ್ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಈ ಮೂಲಕ ಭಾರತ ಒಲಿಂಪಿಕ್ಸ್ ನಲ್ಲಿ 1 ಬೆಳ್ಳಿ ಮತ್ತು 5 ಕಂಚು ಸೇರಿದಂತೆ 6 ಪದಕ ಗೆದ್ದ ಸಾಧನೆ ಮಾಡಿತು.
ಅಮನ್ ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಇತಿಹಾಸ ನಿರ್ಮಿಸಿದರು. ಅಮನ್ 21 ವರ್ಷ, 24 ದಿನದ ವಯಸ್ಸಿನವರಾಗಿದ್ದು, ಈ ಹಿಂದೆ ಪಿವಿ ಸಿಂಧು ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
ವಿಶೇಷ ಅಂದರೆ ಅಮನ್ ಕಂಚಿನ ಪದಕದ ಪಂದ್ಯಕ್ಕೂ ಮುನ್ನ ನಿಗದಿಗಿಂತ 4.6 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ವಿನೇಶ್ ಪೊಗಟ್ 100 ಗ್ರಾಂ ತೂಕ ಹೆಚ್ಚಾಗಿದ್ದರಿಂದ ಫೈನಲ್ ನಲ್ಲಿ ಸ್ಪರ್ಧಿಸಲು ಅವಕಾಶ ಸಿಗದೇ ಆಘಾತಗೊಂಡಿತ್ತು. ಫೈನಲ್ ಗೂ ಮುನ್ನ 1.85 ಕೆಜಿ ತೂಕ ಹೆಚ್ಚಾಗಿದ್ದರಿಂದ ವಿನೇಶ್ ಪೊಗಟ್ ಸಾಕಷ್ಟು ಶ್ರಮ ವಹಿಸಿದ್ದರು. ಅದರಲ್ಲೂ ಸ್ಕಿಪ್ಪಿಂಗ್, ರನ್ನಿಂಗ್ ಮಾಡಿದ್ದೂ ಅಲ್ಲದೇ ಕೂದಲು ಕತ್ತರಿಸಿಕೊಂಡರು. ಅದೂ ಸಾಲದು ಎಂಬಂತೆ ಒಂದು ಬಾಟಲಿ ರಕ್ತ ಕೂಡ ತೆಗೆಸಲಾಗಿತ್ತು.
ಈ ಎಲ್ಲಾ ಶ್ರಮಗಳ ನಡುವೆ ವಿನೇಶ್ ಪೊಗಟ್ 100 ಗ್ರಾಂ ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ಫೈನಲ್ ನಲ್ಲಿ ಸ್ಪರ್ಧಿಸಲು ಅರ್ಹತೆ ಕಳೆದುಕೊಂಡಿದ್ದರು. ಇದರಿಂದ ಮತ್ತೊಂದು ಪದಕ ಕೈ ತಪ್ಪಬಾರದು ಎಂಬ ಕಾರಣಕ್ಕೆ ಇಡೀ ಕುಸ್ತಿ ತಂಡ ಹಾಗೂ ಕೋಚ್ ಗಳು ಅಮನ್ ಶೆರಾವತ್ ಸುಮಾರು 5 ಕೆಜಿ ತೂಕ ಇಳಿಸುವ ದೊಡ್ಡ ಸವಾಲು ಪಡೆದಿತ್ತು.
4.6 ಕೆಜಿ ಅಂದರೆ ಸ್ಪರ್ಧೆಗೆ 56.9 ಕೆಜಿಗೆ ತೂಕ ಇಳಿಸಲು ಕೇವಲ 10 ಗಂಟೆಯ ಸವಾಲು ಪಡೆದ ಅಮನ್ ಮತ್ತು ಕೋಚಿಂಗ್ ತಂಡ ಸಿದ್ಧತೆ ನಡೆಸಿತು.
ಮೊದಲ ಒಂದು ಗಂಟೆ ಕಾಲ ಬಿಸಿನೀರಿನಲ್ಲಿ ಸ್ನಾನ ಮಾಡಿಸಲಾಯಿತು. ನಂತರ ಜಿಮ್ ನಲ್ಲಿ ಒಂದು ಗಂಟೆ ಟ್ರೆಡ್ ಮಿಲ್ ನಲ್ಲಿ ಓಡಿಸಲಾಯಿತು. ಸಾಕಷ್ಟು ಬೆವರಿ ಹರಿಸಿ ಕ್ಯಾಲೋರಿ ಕಡಿತ ಮಾಡಿದ ಮೇಲೆ ಅರ್ಧಗಂಟೆ ವಿಶ್ರಾಂತಿ ನೀಡಲಾಯಿತು.
ನಂತರ ಪ್ರತಿ ಅರ್ಧಗಂಟೆಗೊಮ್ಮೆ ಸ್ನಾನ ಮಾಡಿಸಲಾಯಿತು. ಇದರಿಂದ ಸಾಕಷ್ಟು ತೂಕ ಇಳಿದರೂ 900 ಗ್ರಾಂ ತೂಕ ಇಳಿಸಬೇಕಿತ್ತು. ನಂತರ ಅಮನ್ ಗೆ ಮಸಾಜ್ ಮಾಡಲಾಯಿತು. ನಂತರ ಜಾಗಿಂಗ್ ಮಾಡಿಸಲಾಯಿತು.
ಸುಮಾರು ಒಂದು ಗಂಟೆ ಜಾಗಿಂಗ್ ಮಾಡಿದ ನಂತರ ಅಮನ್ ತೂಕ 56.9 ಕೆಜಿಗೆ ಇಳಿಯಿತು. ಈ ಮೂಲಕ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಪಡೆಯುವ ಅರ್ಹತೆಗಿಂತ 100 ಗ್ರಾಂ ಕಡಿಮೆ ತೂಕ ಹೊಂದಿದ್ದರು. ಇಡೀ ತೂಕ ಇಳಿಸುವ ಶ್ರಮದ ನಡುವೆ ಅಮನ್ ಗೆ ನಿಂಬೆ ಹಣ್ಣಿನ ರಸ, ಜೇನುತಪ್ಪದ ಬೆರೆಸಿದ ನೀರು ಮತ್ತು ಸ್ವಲ್ಪ ಕಾಫಿ ಮಾತ್ರ ನೀಡಲಾಗುತ್ತಿತ್ತು.