ಭಾರತ ಕಂಡ ಕಲಾತ್ಮಕ ಬ್ಯಾಟ್ಸ್ ಮನ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕೂಡ ಟಿ-20 ಕ್ರಿಕೆಟ್ ಲೀಗ್ ಗೆ ಪಾದರ್ಪಣೆ ಮಾಡಲಿದ್ದಾರೆ.
ದ್ರಾವಿಡ್ ಪುತ್ರ ಸಮಿತ್ ಅವರನ್ನು ಕರ್ನಾಟಕ ಟಿ-20 ಕ್ರಿಕೆಟ್ ಲೀಗ್ ಮೈಸೂರು ಮಹಾರಾ ಲೀಗ್ ನಲ್ಲಿ ಮೈಸೂರು ವಾರಿಯರ್ಸ್ ಸೆಳೆದಿದೆ. ಈ ಮೂಲಕ ಪ್ರಸಕ್ತ ಸಾಲಿನ ಕ್ರಿಕೆಟ್ ಲೀಗ್ ನಲ್ಲಿ ಆಡಲಿದ್ದಾರೆ.
ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಯೋಜಿಸುತ್ತಿರುವ ಮಹಾರಾಜ ಕ್ರಿಕೆಟ್ ಲೀಗ್ ನ ಮೈಸೂರು ವಾರಿಯರ್ಸ್ ಫ್ರಾಂಚೈಸಿ 50 ಸಾವಿರ ರೂ.ಗೆ ಸಮಿತ್ ದ್ರಾವಿಡ್ ಅವರನ್ನು ಸೆಳೆದಿದೆ.
ಸಮಿತ್ ಈಗಾಗಲೇ 19 ವರ್ಷದೊಳಗಿನವರ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು, ಕೂಚ್ ಬಿಹಾರ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ್ದಾರೆ. ಇತ್ತೀಚೆಗೆ ಭೇಟಿ ನೀಡಿದ್ದ ಲ್ಯಾಂಕ್ ಶೈರ್ ವಿರುದ್ಧದ ಸೌಹಾರ್ದ ಪಂದ್ಯದಲ್ಲೂ ಕರ್ನಾಟಕ ಪರ ಬ್ಯಾಟ್ ಬೀಸಿದ್ದಾರೆ.
ಕರುಣ್ ನಾಯರ್ ಸಾರಥ್ಯದ ಮೈಸೂರು ವಾರಿಯರ್ಸ್ ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದು, ಭಾರತ ತಂಡವನ್ನು ಪ್ರತಿನಿಧಿಸಿದ್ದ ಪ್ರಸಿದ್ಧ ಕೃಷ್ಣ ಕೂಡ 1 ಲಕ್ಷ ರೂ.ಗೆ ಮೈಸೂರು ವಾರಿಯರ್ಸ್ ಪಾಲಾಗಿದ್ದಾರೆ.