ವಲಸಿಗರು ಡ್ರೋಣ್ ಮೂಲಕ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟು, 9 ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಮಣಿಪುರದಲ್ಲಿ ನಡೆದಿದೆ.
ಕುಕ್ಕಿ ಉಗ್ರರು ಎಂದು ಶಂಕಿಸಲಾದ ಗುಂಪು ಡ್ರೋಣ್ ಮೂಲಕ ಬಾಂಬ್ ದಾಳಿ ನಡೆಸಿದ್ದರಿಂದ 12 ವರ್ಷದ ಬಾಲಕಿ ಹಾಗೂ ಮಹಿಳೆ ಮೃತಪಟ್ಟಿದ್ದಾರೆ. ಇಬ್ಬರು ಪೊಲೀಸರು ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಪಶ್ಚಿಮ ಇಂಫಾಲದಿಂದ 2.5 ಕಿ.ಮೀ. ದೂರದಲ್ಲಿರುವ ಕದಂಗ್ ಬಾದ್ ನ ಕಂಗ್ ಪೊಕ್ಪಿಯ ಮೇಲೆ ಶಸ್ತ್ರಸಜ್ಜಿತ ಡ್ರೋಣ್ ನಿಂದ ಬಾಂಬ್ ಹಾಕಲಾಗಿದೆ. ಬಾಂಬ್ ಬಿದ್ದ ನಂತರ ಜನರು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಡ್ರೋಣ್ ಮೂಲಕ ವಸತಿ ಪ್ರದೇಶದ ಮೇಲೆ ವಲಸಿಗರ ಗುಂಪು ದಾಳಿ ನಡೆಸಿದೆ. ಅಲ್ಲದೇ ಸ್ನಿಪರ್ ಗನ್ ಬಳಸಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಗೃಹ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಇದಕ್ಕೂ ಮುನ್ನ ವಲಸಿಗರ ಗುಂಪು ಪಂಪಿ ಗನ್ ಮತ್ತು ನಾಡಬಾಂಬ್ ಬಳಸಿ ದಾಳಿ ಮಾಡುತ್ತಿದ್ದರು. ಇದೀಗ ಅವರ ಕೈಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇರುತ್ತಿದ್ದು, ದಾಳಿಯ ತೀವ್ರತೆ ಹೆಚ್ಚುವ ಸಾಧ್ಯತೆ ಇದೆ ಎಂದು ಗೃಹ ಇಲಾಖೆ ಆತಂಕ ವ್ಯಕ್ತಪಡಿಸಿದೆ.