ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂದು ಹೇಳಿದ ವೈದ್ಯರು ನಂತರ ಮೃತಪಟ್ಟ ಗಂಡು ಮಗುವಿನ ಶವ ನೀಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಜಯನಗರ ಜಿಲ್ಲೆಯ ಹಗರಿಬೊಮ್ಮನಳ್ಳಿ ಗ್ರಾಮದ ನಿವಾಸಿ ಗೌರಿ ಹೆರಿಗೆಗಾಗಿ ದಾಖಲಾಗಿದ್ದ ಜಿಲ್ಲಾ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಸೆಪ್ಟೆಂಬರ್ 23ರಂದು ಗೌರಿ ಆಸ್ಪತ್ರೆಗೆ ದಾಖಲಾಗಿದ್ದು, 25ರಂದು ಹೆರಿಗೆಯಾಗಿದ್ದು, ಹೆಣ್ಣು ಮಗು ಜನಿಸಿದ್ದು ಕಡಿಮೆ ತೂಕ ಇರುವ ಕಾರಣಕ್ಕೆ ಮಕ್ಕಳ ವಿಶೇಷ ನಿಗಾ ಘಟಕಕ್ಕೆ ಮಗು ರವಾನೆ ಮಾಡಲಾಗುತ್ತದೆ ಎಂದು ವೈದ್ಯರು ಹೇಳಿದ್ದರು.
ಮಂಗಳವಾರ ಚಿಕಿತ್ಸೆಗೆಂದು ದಾಖಲಾಗಿದ್ದ ಮಗು ಸಾವನ್ನಪ್ಪಿದೆ ಎಂದು ಮೃತಪಟ್ಟ ಕೂಸಿನ ಶವ ನೀಡಿದಾಗ ಅದು ಗಂಡು ಮಗುವಿನದ್ದಾಗಿತ್ತು. ಇದರಿಂದ ಹೆತ್ತವರು ಹಾಗೂ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ. ನಮಗೆ ಜನಿಸಿದ ಮಗು ಹೆಣ್ಣಾಗಿತ್ತು. ಈಗ ಹೇಗೆ ಗಂಡು ಆಯಿತು ಎಂದು ಪ್ರಶ್ನಿಸಿದ್ದಾರೆ.
ಮಗುವಿನ ದಾಖಲೆಯಲ್ಲಿಯೂ ಸಹ ಹೆಣ್ಣು ಮಗು ಎಂದೇ ನಮೂದಿಸಲಾಗಿದೆ. ಪಾಲಕರು ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ನಮ್ಮ ಮಗು ನಮಗೆ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದೆ.
ತಾಯಿ ಮತ್ತು ಹೆರಿಗೆ ಆಸ್ಪತ್ರೆಯ ವೈದ್ಯರು ಈ ಕುರಿತು ಸಮಿತಿ ರಚನೆ ಮಾಡಿದ್ದಾರೆ. ತಪ್ಪಾಗಿದ್ದು ಎಲ್ಲಿ ಎನ್ನುವುದನ್ನು ಪತ್ತೆ ಮಾಡಿ, 24 ಗಂಟೆಯೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಮೃತ ಮಗುವಿನ ಮೂಲ ಪತ್ತೆ ಮಾಡುವ ಕಾರ್ಯ ಭರದಿಂದ ನಡೆದಿದೆ ಎಂದು ಕೊಪ್ಪಳ ಜಿಲ್ಲಾ ಶಸ್ತ್ರ ಚಿಕಿತ್ಸಕ ಕೃಷ್ಣಾ ಓಂಕಾರ ತಿಳಿಸಿದ್ದಾರೆ.