ಬೆಂಗಳೂರಿನ ವಿವಿಧ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ ನಡೆಸಿದ ವೇಳೆ ಹೈಡ್ರಾಮಾ ನಡೆದಿದ್ದು, ಅಧಿಕಾರಿಯೊಬ್ಬ ಚಿನ್ನದ ಬ್ಯಾಗ್ ಅನ್ನು ಪಕ್ಕದ ಮನೆಗೆ ಎಸೆದು ಸಿಕ್ಕಿಬಿದ್ದಿರುವುದು ವರದಿಯಾಗಿದೆ.
ಬೆಂಗಳೂರಿನ ಕಲ್ಯಾಣ ನಗರದ ಎಚ್ಎಸ್ ಆರ್ ಬಿ ಲೇಔಟ್ ನಲ್ಲಿರುವ ಕಾನೂನು ಮಾಪನ ಇಲಾಖೆಯ ಡೆಪ್ಯೂಟಿ ಕಂಟ್ರೋಲರ್ ಅತರ್ ಅಲಿ ಮನೆಯಲ್ಲಿ ಈ ಘಟನೆ ನಡೆದಿದೆ.
ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಧಿಕಾರಿಗಳನ್ನು ನೋಡಿದ ಕೂಡಲೇ ಅತರ್ ಅಲಿ ಚಿನ್ನದ ಬ್ಯಾಗ್ ಅನ್ನು ಪಕ್ಕದ ಮನೆಗೆ ಎಸೆದಿದ್ದಾನೆ.
ಬ್ಯಾಗ್ ಬಿದ್ದ ಶಬ್ಧ ಕೇಳಿದ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಲು ಮುಂದಾದಾಗ ಪಕ್ಕದ ಮನೆಯವರು ಬ್ಯಾಗ್ ತಂದುಕೊಟ್ಟಿದ್ದಾರೆ ಎಂದು ಲೋಕಾಯುಕ್ತ ಎಸ್ ಪಿ ವಂಶಿಕೃಷ್ಣ ತಿಳಿಸಿದ್ದಾರೆ.
ಅತರ್ ಅಲಿ ಮನೆಯಿಂದ 25 ಲಕ್ಷ ರೂ. ನಗದು, 2 ಕೆಜಿ ಚಿನ್ನಾಭರಣ ಮತ್ತು 4 ಕೆಜಿಯಷ್ಟು ಬೆಳ್ಳಿಯ ಸಾಮಾನು ಹಾಗೂ ದುಬಾರಿ ವಾಚ್ ಗಳನ್ನು ಪತ್ತೆ ಹಚ್ಚಲಾಗಿದ್ದು, ಶೋಧ ಕಾರ್ಯ ಮುಂದುವರಿದಿದ್ದು, ನಾಲ್ಕೈದು ಕೊಠಡಿಗಳ ಪರಿಶೀಲನೆ ನಡೆದ ನಂತರ ಅಂತಿಮ ಚಿತ್ರಣ ದೊರೆಯಲಿದೆ ಎಂದು ವಂಶಿಕೃಷ್ಣ ವಿವರಿಸಿದ್ದಾರೆ.